ಕುಂಬ್ಳ: ಸ್ಕೂಟರ್ ಗೋಡೆಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ 15 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಆಕೆಯ ಸ್ನೇಹಿತೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ಕುಂಬ್ಳ ಸಮೀಪದ ಉಲ್ವಾರ್ ಗ್ರಾಮದ ಪೂಕ್ಕಟ್ಟಾದಲ್ಲಿ ಸಂಭವಿಸಿದೆ.

ಮೃತಳನ್ನು ಕುಂಬ್ಳ ಬಳಿಯ ಬಂಬ್ರಾನಾದ ಚೂರಿತಡ್ಕದ ರಜಾಕ್ ಮತ್ತು ರಾಮ್ಜೀನಾ ದಂಪತಿಯ ಪುತ್ರಿ ರಿಜ್ವಾನಾ (15) ಎಂದು ಗುರುತಿಸಲಾಗಿದೆ. ಆಕೆ ಕುಂಬ್ಳ ಸಮೀಪದ ಕೊಡಿಯಮ್ಮೆಯ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಘಟನೆಯ ಸಮಯದಲ್ಲಿ ಇಬ್ಬರೂ ಟ್ಯೂಷನ್‌ಗೆ ಹೋಗುತ್ತಿದ್ದರೆಂದು ವರದಿಯಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಕೂಟರ್ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದ ಸಮಯದಲ್ಲಿ 125 ಸಿಸಿ ಸಾಮರ್ಥ್ಯದ ಸ್ಕೂಟರ್ ಯಾರು ಚಾಲನೆ ಮಾಡುತ್ತಿದ್ದರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ಎರಡನೇ ಸವಾರನ ವಯಸ್ಸು 14 ರಿಂದ 20 ವರ್ಷದೊಳಗೆ ಎಂದು ಉಲ್ಲೇಖಿಸಲಾಗಿದೆ.

ಕಾನೂನು ಪ್ರಕಾರ 50 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನವನ್ನು ಚಾಲನೆ ಮಾಡಲು ಕನಿಷ್ಠ ವಯಸ್ಸು 18 ವರ್ಷವಾಗಿದ್ದು, ಅಜಾಗರೂಕ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಮಾನವ ಜೀವಕ್ಕೆ ಅಪಾಯ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಅಡಿಯಲ್ಲಿ ಪೊಲೀಸರು ಅತಿವೇಗದ ಚಾಲನೆ (ಸೆ. 281), ನಿರ್ಲಕ್ಷ್ಯದಿಂದ ಸಾವಿಗೆ ಕಾರಣ (ಸೆ. 106(1)), ಹಾಗೂ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ (ಸೆ. 125(ಎ)) ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.
ಗಂಭೀರ ಗಾಯಗೊಂಡ ರಿಜ್ವಾನಾ ಅವರನ್ನು ಮೊದಲು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.