ಫೆ.11ರಿಂದ 14ರವರೆಗೆ ಕದಿಕೆ ಹಳೆಯಂಗಡಿ ಹಝ್ರತ್ ಸೈಯದ್ ಮೌಲಾನವಲಿಯುಲ್ಲಾಹಿ ದರ್ಗಾದಲ್ಲಿ ಉರೂಸ್ ಸಂಭ್ರಮ

ಮಂಗಳೂರು: ಕದಿಕೆ ಹಳೆಯಂಗಡಿಯಲ್ಲಿ ಇರುವ ಹಝ್ರತ್ ಸೈಯದ್ ಮೌಲಾನವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಇದರ ವಾರ್ಷಿಕ ಉರೂಸ್ ಸಮಾರಂಭವು ಫೆಬ್ರವರಿ 11ರಿಂದ 14ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನಗಳು, ಸ್ವಲಾತ್ ಮಜ್ಲಿಸ್, ಸಂದಲ್ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉರೂಸ್ ಉದ್ಘಾಟನಾ ಸಮಾರಂಭವು ಫೆಬ್ರವರಿ 11ರ ಬುಧವಾರ ಸಂಜೆ 7 ಗಂಟೆಗೆ ನಡೆಯಲಿದ್ದು, ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ ಹಾಜ್ ಮಹಮ್ಮದ್ ಅಝರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನ ನೀಡಲಿದ್ದು, ಬದ್ರಿಯ ಜುಮಾ ಮಸೀದಿ, ಸಾಗ್ ಖತೀಬರಾದ ಬಹು. ಇ.ಯಂ. ಅಬ್ದುಲ್ಲಮದನಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ವಾಗತ ಭಾಷಣವನ್ನು ಕೇಂದ್ರ ಜುಮಾ ಮಸೀದಿ ಕದಿಕೆ ಖತೀಬರಾದ ಬಹು. ಪಿ.ಎ. ಅಬ್ದುಲ್ಲ ಝನಿ ಬಡಗನ್ನೂರು ಅವರು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಬಹು. ಡಾ. ಐ. ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ಅವರು ಮತ ಪ್ರವಚನ ನೀಡಲಿದ್ದಾರೆ.

ಫೆಬ್ರವರಿ 12ರ ಗುರುವಾರ ರಾತ್ರಿ 8 ಗಂಟೆಗೆ ಸ್ವಲಾತ್ ಮಜ್ಲಿಸ್ ನಡೆಯಲಿದ್ದು, ಪ್ರಸಿದ್ಧ ಸೂಫಿವರ್ಯರಾದ ಅಸೈಯದ್ ವಿ.ಪಿ. ಅಬ್ದುಲ್ ರಹಿಮಾನ್ ದಾರಿಮಿ (ಅಚ್ಛೇರಿ ತಂಞಳ್) ಅವರ ನೇತೃತ್ವದಲ್ಲಿ ಸ್ವಲಾತ್ ಜರುಗಲಿದೆ. ಈ ಸಂದರ್ಭದಲ್ಲಿ ಎಸ್.ಬಿ. ಮಹಮ್ಮದ್ ಶರೀಫ್ ಅರ್ಶದಿ ಅಲ್ ಹಾಮಿದಿ ಮುದ್ರಗ್ರಿಸ್ (ಎಂ.ಜೆ.ಎಂ., ಬೊಳ್ಳೂರು) ಮತ ಪ್ರವಚನ ನೀಡಲಿದ್ದಾರೆ. ಫೆಬ್ರವರಿ 13ರ ಶುಕ್ರವಾರ ರಾತ್ರಿ 8 ಗಂಟೆಗೆ ನಡೆಯುವ ಮತ ಪ್ರವಚನ ಕಾರ್ಯಕ್ರಮವನ್ನು ಬಹು. ಇಬ್ರಾಹಿಂ ಸಖಾಫಿ ತಾತೂರು ಅವರು ನಡೆಸಿಕೊಡಲಿದ್ದಾರೆ.

ಉರೂಸ್ ಸಮಾರಂಭದ ಅಂಗವಾಗಿ ಫೆಬ್ರವರಿ 14ರ ಶನಿವಾರ ಸಂಜೆ 7 ಗಂಟೆಗೆ ಬೃಹತ್ ಸಂದಲ್ ಮೆರವಣಿಗೆ (ಉರೂಸ್ ರ್ಯಾಲಿ) ನಡೆಯಲಿದೆ. ಅದೇ ದಿನ ರಾತ್ರಿ 9 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭವನ್ನು ಬಹು. ಪಿ.ಎ. ಅಬ್ದುಲ್ಲ ಝನಿ ಬಡಗನ್ನೂರು ಅವರು ಉದ್ಘಾಟಿಸಲಿದ್ದು, ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಐಸಿ ಕುಂಬ ಪ್ರಿನ್ಸಿಪಾಲ್ ಬಹು. ಅನಿಸ್ ಕೌಸರಿ ಅವರು ಮುಖ್ಯ ಪ್ರಭಾಷಣ ನೀಡಲಿದ್ದಾರೆ.

ಈ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕರು ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸೇರಿದಂತೆ ಹಲವು ಗಣ್ಯರು, ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಪಡುತೋಟ, ಕಾರ್ಯದರ್ಶಿಗಳಾದ ಎಚ್.ಕೆ. ಮಹಮ್ಮದ್ ಹಾಗೂ ಪಕ್ರುದ್ದೀನ್, ಪ್ರಚಾರ ಸಮಿತಿ ಅಧ್ಯಕ್ಷ ಜಮಾಲುದ್ದೀನ್ ಕದಿಕೆ ಮತ್ತು ಸಂದಲ್ ಉಸ್ತುವರು ಕಾದರ್ ಕೋಡಿಕಲ್ ಉಪಸ್ಥಿತರಿದ್ದರು.

error: Content is protected !!