ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ಧತೆ; ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ಶಾಕ್‌ ನೀಡಿದ ಮೊದಲ ಪತ್ನಿ

ಕುಣಿಗಲ್‌: ಹೆಂಡತಿಗೆ ಕೈಕೊಟ್ಟು, ಮತ್ತೋರ್ವ ಯುವತಿಗೆ ತಾಳಿಕಟ್ಟುವ ವೇಳೆ ವಕೀಲರು ಹಾಗೂ ಪೊಲೀಸರೊಂದಿಗೆ ಪತ್ನಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ಪತಿಯ ಎರಡನೇ ಮದುವೆ ತಡೆದ ಘಟನೆ ತಾಲೂಕಿನ ಶ್ರೀ ಕ್ಷೇತ್ರ ಎಡಿಯೂರಿನ ಕಲ್ಯಾಣ ಮಂಟಪದಲ್ಲಿ ಭಾನುವಾರ(ಫೆ.8) ನಡೆದಿದೆ.

ಬೆಂಗಳೂರು ರಾಜರಾಜೇಶ್ವರಿ ನಗರದ ಕ್ರೀಡಾ ತರಬೇತಿದಾರ ಎಸ್‌.ಪಿ ಹರೀಶ್‌ಪ್ರಸಾದ್‌ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ನಿಟ್ಟೂರು ಗ್ರಾಮದ ಎನ್‌.ಎಸ್‌. ಪುಣ್ಯಶ್ರೀ ಅವರೊಂದಿಗೆ ಎರಡನೇ ಮದುವೆಯಾಗುತ್ತಿದ್ದ ವೇಳೆ ಮೊದಲ ಪತ್ನಿ ಲೇಪಾಕ್ಷಿ ಕಲ್ಯಾಣ ಮಂಟಪಕ್ಕೆ ಬಂದು ವಿವಾಹವನ್ನು ನಿಲ್ಲಿಸಿ ಮದುವೆ ಸಂಭ್ರಮದಲ್ಲಿ ಇದ್ದ ಕುಟುಂಬಕ್ಕೆ ಶಾಕ್‌ ನೀಡಿದ್ದಾರೆ. ಈ ವೇಳೆ ಮಾತಿನ ಚಕಮಕಿ ವಾಗ್ವಾದ ನಡೆದಿದ್ದು, ಅಮೃತ್ತೂರು ಪೊಲೀಸರು ಹಾಗೂ ವಕೀಲರು ಮಧ್ಯ ಪ್ರವೇಶಿಸಿ ಮದುವೆ ನಿಲ್ಲಿಸಿದರು.

ಹರೀಶ್‌ ಪ್ರಸಾದ್‌ ಮತ್ತು ಲೇಪಾಕ್ಷಿ ಅವರು ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲೇ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ನಂತರ 2014 ರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಮದುವೆ ಆಗಿದ್ದರು ಎನ್ನಲಾಗಿದೆ. ಹರೀಶ್‌ ಪ್ರಸಾದ್‌ ಮೊದಲ ಹೆಂಡತಿ ಲೇಪಾಕ್ಷಿಗೆ ವಿವಾಹ ವಿಚ್ಛೇದನ ನೀಡದೆ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ.

ಮೊದಲ ಹೆಂಡತಿ ಲೇಪಾಕ್ಷಿ ಮಾತನಾಡಿ, ನಾನು ಮತ್ತು ಹರೀಶ್‌ ಪ್ರಸಾದ್‌ ಕ್ರೀಡಾ ಚಟುವಟಿಕೆಯಲ್ಲಿ ಇದ್ದೆವು, ಆ ಸಮಯದಲ್ಲಿ ಇಬ್ಬರ ನಡುವೆ ಪ್ರೇಮ ಉಂಟಾಗಿ ನಾಲ್ಕು ವರ್ಷ ಚೆನ್ನಾಗಿ ಇದ್ದೇವು, ನಮ್ಮ ಅತ್ತೆಯವರು ಮತ್ತೋಮ್ಮೆ ಮರು ಮದುವೆ ಮಾಡಿ ಕರೆದುಕೊಂಡು ಹೊದರು. ಅದಾದ ಬಳಿಕ ಸಂಸಾರಿಕ ಜಗಳ ಪ್ರಾರಂಭವಾಗಿತ್ತು, ಇದಾದ ಬಳಿಕ ನನಗೆ ಐದು ಭಾರಿ ಗರ್ಭಪಾತ ಮಾಡಿಸಿದ್ರು, ನನ್ನನು ಸಂಪಾದನೆಗೆ ಮಾತ್ರ ಬಳಸಿಕೊಳ್ಳುತ್ತಿದ್ದರು. ವಿಚ್ಚೇಧನ ನೀಡದೆ ಮತ್ತೊಂದು ಮದುವೆಯಾಗುವ ವಿಚಾರ ತಿಳಿದು ಬಂದು ಮದುವೆ ನಿಲ್ಲಿಸಿದ್ದೇನೆ ಎಂದು ತಿಳಿಸಿದರು.

ಹರೀಶ್‌ ಪ್ರಸಾದ್‌ ಮೊದಲ ಮದುವೆ ಆಗಿರುವುದನ್ನು ಮುಚ್ಚಿಟ್ಟಿದ್ದಾರೆ ಎಂದು ಪುಣ್ಯ ಶ್ರೀ ಅಮೃತ್ತೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಜಿಎಸ್‌ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!