ಮುತ್ತುರಾಜನ ʻಮೃತ್ಯು’ ಜಾಲ- ಶಕುಂತಲಾದೇವಿಯ ಸಂಕಟ: ಬಲಿಯಾಯಿತು ಎರಡು ಜೀವ!

ಮಂಡ್ಯ: ಇದು ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಬೆಲ್ಲದಂತಹ ಬಾಳನ್ನು ವಿಷವಾಗಿಸಿದ ಕತೆ. ಮಳವಳ್ಳಿಯ ದಳವಾಯಿ ಕೋಡಿಹಳ್ಳಿ ಎಂಬ ಪುಟ್ಟ ಹಳ್ಳಿ ಇವತ್ತು ಮೌನವಾಗಿದೆ. ಅಲ್ಲಿ ಕೇಳಿಬರುತ್ತಿರುವುದು ಕೇವಲ ಆ ಮನೆಯ ಯಜಮಾನ ಮಹೇಶ್ ಎಂಬ ನತದೃಷ್ಟನ ಗೋಳು ಮಾತ್ರ.

ಮುತ್ತುರಾಜನ ‘ಮೃತ್ಯು’ ಜಾಲ!
ಅವನ ಹೆಸರು ಮುತ್ತುರಾಜ. ವಯಸ್ಸು ಮೂವತ್ತರ ದಾಟಿದೆ, ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆದರೆ ಇವನ ಕಣ್ಣು ಬಿದ್ದಿದ್ದು ಮಾತ್ರ ಅದೇ ಗ್ರಾಮದ 19 ವರ್ಷದ ಕಾಲೇಜು ಹುಡುಗಿ ಪ್ರಿಯಾಂಕಾ ಮೇಲೆ. ಹರೆಯದ ಹುಡುಗಿಗೆ ಈತ ಆಸೆ ತೋರಿಸಿದ್ದೋ ಅಥವಾ ಆಕೆಯ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡಿದ್ದೋ ಗೊತ್ತಿಲ್ಲ, ಆದರೆ ಆಕೆಯ ಹಿಂದೆ ಬಿದ್ದು ಹೋದವನು ಮಾತ್ರ ಮುತ್ತುರಾಜನೇ. ಪ್ರತಿದಿನ ಆಕೆಯ ಮನೆಗೆ ಹೋಗಿ ಪ್ರೀತಿಯ ನಾಟಕವಾಡುತ್ತಿದ್ದ ಈ ಕಿರಾತಕನ ಅಸಲಿ ಬುದ್ಧಿ ಯಾರಿಗೂ ಗೊತ್ತಿರಲಿಲ್ಲ.

ಶಕುಂತಲಾದೇವಿಯ ಸಂಕಟ…!
ಇತ್ತ ತಾಯಿ ಶಕುಂತಲಾದೇವಿಗೆ ಮಗಳ ನಡವಳಿಕೆಯಲ್ಲಿ ವ್ಯತ್ಯಾಸ ಕಂಡಾಗ ಆಕೆ ಬೆಚ್ಚಿಬಿದ್ದಳು. ಕಾಲೇಜಿಗೆ ಹೋಗುವ ಮಗಳಿಗೆ ಸಂಬಂಧದಲ್ಲೇ ಒಬ್ಬ ವರನನ್ನು ಹುಡುಕಿ, ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಆ ತಾಯಿಗೆ ಮಗಳ ಪ್ರೀತಿಯ ವಿಚಾರ ‘ಶಾಕ್’ ನೀಡಿತ್ತು. ಮಗಳಿಗೆ ಬುದ್ಧಿ ಹೇಳಿದಳು, ಆ ಮುತ್ತುರಾಜನಿಗೆ ಬೈದು ಕಳಿಸಿದಳು. ಆದರೆ ಆತ ಬಿಡಬೇಕಲ್ಲ? ಕಾಮದ ಅಮಲು ಕಣ್ಣಿಗೆ ಕಪ್ಪಾಗಿ ಬೆಳೆದಿದ್ದ ಆ ಮುತ್ತುರಾಜ, ಆಕೆಯ ಮೇಲೆ ಒತ್ತಡ ಹೇರುತ್ತಲೇ ಇದ್ದ.

ಮರ್ಯಾದೆಗೆ ಅಂತ್ಯವಾಯಿತು ಎರಡು ಜೀವ!
“ಲೋಕಕ್ಕೆ ಈ ವಿಷಯ ಗೊತ್ತಾದರೆ ಮುಖ ಎಲ್ಲಿ ಇಟ್ಟುಕೊಳ್ಳುವುದು?” ಎಂಬ ಮರ್ಯಾದೆಯ ಪ್ರಶ್ನೆ ಆ ತಾಯಿಯನ್ನು ಕೊರೆಯಿತು. ಮಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಹೇಗೆ ಬದುಕುವುದು ಎಂಬ ಆತಂಕ ಆವರಿಸಿತು. ಕೊನೆಗೆ, ಆ ಮರ್ಯಾದೆಗೆ ಹೆದರಿ ತಾಯಿ ಶಕುಂತಲಾದೇವಿ ಮತ್ತು ಮಗಳು ಪ್ರಿಯಾಂಕಾ ಇಬ್ಬರೂ ಸಾವಿನ ಹಾದಿ ಹಿಡಿದುಬಿಟ್ಟರು. ಮನೆಯೊಳಗೆ ಎರಡು ಹೆಣಗಳು ಬಿದ್ದಿದ್ದನ್ನು ಕಂಡ ಆ ತಂದೆಯ ಆರ್ತನಾದಕ್ಕೆ ಈಗ ಮಳವಳ್ಳಿಯೇ ಮರುಗುತ್ತಿದೆ.

error: Content is protected !!