ಸಂತ ಅಲೋಶಿಯಸ್ ವಿವಿಯಿಂದ “ಅಲಿಖಿತ ಆಲೋಚನೆಗಳ ಎಳೆಗಳು”

ಮಂಗಳೂರು: ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ವತಿಯಿಂದ “ಅಲಿಖಿತ ಆಲೋಚನೆಗಳ ಎಳೆಗಳು” (Threads of Unwritten Thoughts) ಎಂಬ ಪರಿಕಲ್ಪನೆಯಡಿ ‘TEDxStAloysius’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಸಹಕುಲಪತಿ ರೆ. ಡಾ. ಮೆಲ್ವಿನ್ ಡಿ.ಕುನಾ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 146 ವರ್ಷಗಳ ಶೈಕ್ಷಣಿಕ ಇತಿಹಾಸ ಹೊಂದಿರುವ ಅಲೋಶಿಯಸ್ ಸಂಸ್ಥೆಯು ನವೀನ ಆಲೋಚನೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಈ ವೇದಿಕೆ ಕಲ್ಪಿಸುತ್ತಿದೆ. TEDx ವೇದಿಕೆ ಯುವಜನರಿಗೆ ಹೊಸ ಆಲೋಚನೆಗಳು, ಸೃಜನಶೀಲತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಹಂಚಿಕೊಳ್ಳುವ ಮಹತ್ವದ ಅವಕಾಶವಾಗಿದೆ. ಶಿಕ್ಷಣವು ಕೇವಲ ಅಕಾಡೆಮಿಕ್ ಜ್ಞಾನಕ್ಕೆ ಸೀಮಿತವಾಗದೆ ಸಮಾಜದ ಪರಿವರ್ತನೆಗೆ ದಾರಿಯಾಗಬೇಕು ಎಂಬ ದೃಷ್ಟಿಕೋನವನ್ನು TEDx ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

TEDxStAloysius ಸಂಚಾಲಕ ಡಾ. ದಿನೇಶ್ ನಾಯಕ್ ಮಾತನಾಡಿ, ಈ ವರ್ಷದ TEDxStAloysius ಥೀಮ್ “ಅಲಿಖಿತ ಆಲೋಚನೆಗಳ ಎಳೆಗಳು” ಆಗಿದ್ದು, ಮಾನವ ಸೃಜನಶೀಲತೆಯನ್ನು ಮುನ್ನಡೆಸುವ ಕಾಣದ ಕಲ್ಪನೆಗಳು ಹೇಗೆ ಸಮಾಜವನ್ನು ರೂಪಿಸುತ್ತವೆ ಎಂಬುದನ್ನು ಈ ಕಾರ್ಯಕ್ರಮ ಅನಾವರಣಗೊಳಿಸಲಿದೆ ಎಂದು ತಿಳಿಸಿದರು. ವಿಭಿನ್ನ ಕ್ಷೇತ್ರಗಳ ಚಿಂತಕರು ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.

ಸಹ-ಸಂಚಾಲಕಿ ಕು. ಅನಾ ಮಾತನಾಡಿ, ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯಕ್ಕೆ ಹೊಸ ಚಿಂತನೆಗಳ ಪ್ರೇರಣೆಯಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿ ಸಂಯೋಜಕ ರಯ್ಯನ್ ಜಹಿ ಖಾನ್ TEDxStAloysius ಕಾರ್ಯಕ್ರಮವು ಮಂಗಳೂರಿನ ಸಾಂಸ್ಕೃತಿಕ ಹಾಗೂ ಬೌದ್ಧಿಕ ವೈಶಿಷ್ಟ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಸಂಯೋಜಕಿ ರಯ್ಯನ್ ಜಹಿ ಖಾನ್ ಮಾತನಾಡಿ, “TEDxStAloysius ಕೇವಲ ಭಾಷಣದ ವೇದಿಕೆಯಲ್ಲ, ಇದು ಬದಲಾವಣೆ ತರುವ ಅಲಿಖಿತ ಆಲೋಚನೆಗಳ ಸಂಗಮ. ಮಂಗಳೂರಿನ ಯುವಜನತೆಯಲ್ಲಿ ಹೊಸ ಸ್ಫೂರ್ತಿ ತುಂಬಲು ನಾವು ಹತ್ತು ವಿಭಿನ್ನ ಕ್ಷೇತ್ರಗಳ ಸಾಧಕರನ್ನು ಒಂದೇ ವೇದಿಕೆಗೆ ತರುತ್ತಿದ್ದೇವೆ. ಸೃಜನಶೀಲತೆ ಮತ್ತು ನವೀನ ಚಿಂತನೆಗಳಿಗೆ ಈ ಕಾರ್ಯಕ್ರಮ ಹೊಸ ದಾರಿಯಾಗಲಿದೆ,” ಎಂದು ರಯ್ಯನ್ ಜಹಿ ಖಾನ್ ತಿಳಿಸಿದರು.

10 ಮಂದಿ ಭಾಷಣಕಾರರು
ಈ ಬಾರಿ TEDxStAloysius ನಲ್ಲಿ ಉದ್ಯಮ, ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ, ಪರಿಸರ, ಕ್ರೀಡೆ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಒಟ್ಟು 10 ಭಾಷಣಕಾರರು ಭಾಗವಹಿಸಲಿದ್ದಾರೆ. ಉದ್ಯಮಿ ಹಾಗೂ ಶಿಕ್ಷಣತಜ್ಞ ಹೃತಿಕ್ ಶರ್ಮಾ, ಪ್ರಮಾಣೀಕೃತ ಪೌಷ್ಟಿಕತಜ್ಞೆ ಮತ್ತು ಫಿಟ್ನೆಸ್ ತರಬೇತುದಾರ ಸಿಮ್ರನ್ ಚೋಪ್ರಾ, ಫ್ಯಾಷನ್ ಸ್ಟೈಲಿಸ್ಟ್ ಹಾಗೂ ವಿಷಯ ಸೃಷ್ಟಿಕರ್ತ ಮರಿಯಂ ಹುಸೇನ್, ಎ.ಜೆ. ಆಸ್ಪತ್ರೆಯ ಅನುಭವಿ ಇಎನ್‌ಟಿ ತಜ್ಞ ಡಾ. ಪಿ.ಪಿ. ದೇವನ್, ಶಿಕ್ಷಣತಜ್ಞೆ ಹಾಗೂ ಕ್ಷೇಮ ವೈದ್ಯೆ ಲೀಜಾ ಕಿರಣ್ ರೋಡ್ರಿಗಸ್, ರಾಷ್ಟ್ರಮಟ್ಟದ ಯಕ್ಷಗಾನ ಕಲಾವಿದೆ ಅದ್ವಿಕಾ ಶೆಟ್ಟಿ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ವಿಶ್ವಸಂಸ್ಥೆಯ ಪ್ರಶಸ್ತಿ ಪುರಸ್ಕೃತೆ ಜಬಿ ಖಾನ್, ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಹಾಗೂ ಛಾಯಾಗ್ರಾಹಕ ಪ್ರಶಾಂತ್ ಎಸ್. ನಾಯಕ್, ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಮತ್ತು ನಾಯಕತ್ವ ತರಬೇತುದಾರ ಕರ್ನಲ್ ಅರುಣ್ ಅಯ್ಯರ್ ಹಾಗೂ ಕ್ರೀಡಾ ಉದ್ಯಮಿ ಹೇಮಂತ್ ಶರ್ಮಾ ಅವರು ತಮ್ಮ ಅನುಭವ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಿಆರ್‌ಒ ಚಂದ್ರಕಲಾ ಉಪಸ್ಥಿತರಿದ್ದರು.

error: Content is protected !!