ʻಕೇರಳದಲ್ಲಿ‌ ಭ್ರಷ್ಟ ಅಧಿಕಾರಿಗಳನ್ನು ಒಡೆದು ಓಡಿಸುವ ಹಾಗೆ ಕರ್ನಾಟಕದಲ್ಲೂ ಮಾಡ್ಬೇಕುʼ: ಕೊಟ್ಟಾರಚೌಕಿ ಅವ್ಯವಸ್ಥೆ ವಿರುದ್ಧ ʻಜನಹಿತ ರಕ್ಷಣಾ ಸಮಿತಿʼಯಿಂದ ಮೊಳಗಿದ ರಣಕಹಳೆ

              

ಮಂಗಳೂರು: ಕೊಟ್ಟಾರ ಚೌಕಿ, ಮಾಲೆಮಾರ್ ಹಾಗೂ ಮಾಲಾಡಿ ಕೋರ್ಟ್ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕಾಡುತ್ತಿರುವ ರಸ್ತೆ, ಸಂಚಾರ, ಸುರಕ್ಷತೆ ಹಾಗೂ ಒಳಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಜನಹಿತ ರಕ್ಷಣಾ ಸಮಿತಿ – ನೆಕ್ಕಿಲ ಮಾಲೆಮಾರ್, ಕೊಟ್ಟಾರ ಚೌಕಿ ಮಂಗಳೂರು ಇದರ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಇಂದು ಧರಣಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಮಾರ್‌ ಮಲೆಮಾರ್ ಮಾತನಾಡಿ, ಭ್ರಷ್ಟ ಅಧಿಕಾರಿಗಳಿಂದಾಗಿ ಇಷ್ಟು ಮಂದಿ ಬೀದಿಗಿಳಿಯಲು ಕಾರಣರಾಗಿದ್ದಾರೆ. ಕೇರಳದಲ್ಲಿ ಹೇಗೆ ಈ ಭ್ರಷ್ಟ ಅಧಿಕಾರಿಗಳನ್ನು ಒಡೆದು ಓಡಿಸ್ತಾರಾ ಅದೇ ರೀತಿ ಕರ್ನಾಟಕದ ಜನತೆ ಕೂಡ ಮಾಡ್ಬೇಕು. ಆಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ನೋಡ್ಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರದೇಶದ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಈ ಭಾಗದ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಗಮನಕ್ಕೆ ನಿರಂತರವಾಗಿ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ, ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಯಾವುದೇ ಸಮಸ್ಯೆಗೂ ಇದುವರೆಗೂ ಶಾಶ್ವತ ಪರಿಹಾರ ದೊರಕಿಲ್ಲ. ಇದರಿಂದಾಗಿ ಇಂದು ಧರಣಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.

ಎನ್‌ಎಚ್‌ಎಐ ಕಚೇರಿಗೆ ನುಗ್ತೇವೆ- ಕೇಸ್‌ ಹಾಕಿದ್ರೂ ತೊಂದ್ರೆ ಇಲ್ಲ:
ಸ್ಥಳೀಯ ಸಾಮಾಜಿಕ ಹೋರಾಟಗಾರ ವಿಜಯಕುಮಾರ್‌ ಮಾತನಾಡಿ, ಎನ್‌ಎಚ್‌ಎಐ ಅಧಿಕಾರಿಯೊಬ್ಬನಿಗೆ ಎಷ್ಟೊಂದು ಬೇಜವಾಬ್ದಾರಿ ಎಂದರೆ ಜನರಿಗೆ ಗೌರವನ್ನೇ ಕೊಡದ ಮನುಷ್ಯ. ಇತ್ತೀಚೆಗೆ ಅಪಘಾತ ಆದಾಗ ಆ ಅಧಿಕಾರಿಯನ್ನು ಸ್ಥಳಕ್ಕೆ ಬರ್ಬೇಕೆಂದು ಪ್ರತಿಭಟನೆ ಮಾಡಿದರೂ ಬರಲಿಲ್ಲ. ಇವತ್ತು ಫೋನ್‌ ಮಾಡುವಾಗ ನಾನು 11.30ರೆಗೆ ಬರ್ತೀನಿ ಅಂತ ಹೇಳಿದ್ದರು. ಈಗ ಫೋನ್‌ ಮಾಡುವಾಗ ನಾನು ಸೈಟ್‌ನಲ್ಲಿದ್ದೇನೆ ಬರ್ಲಿಕ್ಕೆ ಆಗುವುದಿಲ್ಲ ಎಂದು ಉಡಾಫೆ ಉತ್ತರ ಕೊಡ್ತಾ ಇದ್ದಾನೆ. ಹಾಗಾಗಿ ಮುಂದಿನ ಸೋಮವಾರ ನಾವು ಎನ್‌ಎಚ್‌ಯುಐ ಆಫೀಸಿಗೆ ನುಗ್ಗಬೇಕು. ನಮ್ಮ ಮೇಲೆ ಕೇಸಾದ್ರೂ ಮಾಡಿ, ನಮ್ಮ ಮೇಲೆ ಎಫ್‌ಐಆರ್‌ ಆದ್ರೂ ಹಾಕಿ, ನಮ್ಮನ್ನು ಒಳಗೆ ಹಾಕಿ ತೊಂದರೆ ಇಲ್ಲ. ನಾವು ಇಂಥಾ ಬೇಜವಾಬ್ದಾರಿ ಅಧಿಕಾರಿಗಳು ಮಂಗಳೂರಿನಲ್ಲಿ ಇರುವುದು ಬೇಡ.ಇಂಥಾ ಅಧಿಕಾರಿಗಳ ವಿರುದ್ಧ ನಾವು ಪ್ರತಿಭಟನೆ ಮಾಡ್ಲೇಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ನಿರತರ ಬೇಡಿಕೆಗಳು:
ಧರಣಿಯಲ್ಲಿ ಭಾಗವಹಿಸಿದವರು ಮಾಲೆಮಾರ್ ಚೌಕಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ಮಾಲೆಮಾರ್–ಕುಂಟಿಕಾನ ನಡುವಿನ ಸರ್ವಿಸ್ ರಸ್ತೆ ನಿರ್ಮಾಣ, ಕೊಟ್ಟಾರ ಚೌಕಿಯಿಂದ ಮಾಲಾಡಿ ರಸ್ತೆ ಕಡೆಗಿನ ತಿರುವನ್ನು ಸಂಚಾರಕ್ಕೆ ಅನುಕೂಲವಾಗುವಂತೆ ಸರಾಗಗೊಳಿಸುವುದು, ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ಫ್ಲಡ್ ಲೈಟ್ ಅಳವಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ನಾಗರಿಕರು ಮುಂದಿಟ್ಟರು.

ಅದೇ ರೀತಿ ಕೋಡಿಕಲ್ ಕ್ರಾಸ್ ಬಳಿ ಅತಿಕ್ರಮಣ ತೆರವುಗೊಳಿಸುವುದು, ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು, ಕೊಟ್ಟಾರ ಚೌಕಿಯಲ್ಲಿ ಸಿಗ್ನಲ್ ಲೈಟ್, ಜೀಬ್ರಾ ಕ್ರಾಸಿಂಗ್, ಬಸ್ ಬೇ ಹಾಗೂ ರಸ್ತೆ ಮಾರ್ಕಿಂಗ್ ಅಳವಡಿಸುವುದು, ಮಾಲೆಮಾರ್ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟುಮಾಡುವುದನ್ನು ತಡೆಯುವುದು ಹಾಗೂ ಮಳೆನೀರು ಹರಿಯುವ ಚರಂಡಿಗೆ ಡ್ರೈನೇಜ್ ನೀರು ಬಿಡುವುದನ್ನು ತಕ್ಷಣ ನಿಲ್ಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರದೇಶದಲ್ಲಿ ದಿನೇದಿನೇ ವಾಹನ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ರಸ್ತೆ ವ್ಯವಸ್ಥೆ, ಸಂಚಾರ ನಿಯಂತ್ರಣ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಮೇಲ್ಕಂಡ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು. ಸಮಸ್ಯೆ ಸರಿಪಡಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಧಿಕ್ಕಾರ ಹಾಕಲಾಯಿತು. ಪ್ರತಿಭಟನೆಯಲ್ಲಿ ದಯಾನಂದ ಶೆಟ್ಟಿ, ಶಿವಾನ್‌ ಪಾಲ್ದಡಿ ಮುಂತಾದವರಿದ್ದರು.

error: Content is protected !!