ಮಂಗಳೂರು: ಮಂಗಳೂರಿನಲ್ಲಿ ರಂಗಮಂದಿರ, ಅಸೈಗೋಳಿಯಲ್ಲಿ ಬ್ಯಾರಿ ಭವನ, ದೇರೆಬೈಲಿಗೆ ಟೆಕ್‌ಪಾರ್ಕ್, ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್-ಒಪಿಡಿ, ತಲಪಾಡಿ-ಸುರತ್ಕಲ್ ರಿಂಗ್ ರೋಡ್ ನಿರ್ಮಾಣ ಮಾಡಲಾಗುವುದು ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಗೌರವ ಸ್ವೀಕರಿಸಿ ಮಾತನಾಡಿದ ಅವರು ದಕ್ಷಿಣ ಕನ್ನಡಕ್ಕೆ ಹೊಸ ಹೊಸ ಯೋಜನೆಗಳನ್ನು ಪ್ರಕಟಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದ ಜನಪರ ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಜನರು ನೇರ ಪ್ರಯೋಜನ ಪಡೆಯುತ್ತಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ಮೂಲಸೌಕರ್ಯ ವಲಯಗಳಲ್ಲಿ ಜಿಲ್ಲೆಯಾದ್ಯಂತ ಹಲವಾರು ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.

ಪ್ರವಾಸೋದ್ಯಮದ ಅಭಿವೃದ್ದಿಗೆ, ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವ ಯೋಜನೆ ಜಾರಿಯಲ್ಲಿದ್ದು, ಮಂಗಳೂರಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸಾಂಸ್ಕೃತಿಕ ವಲಯದಲ್ಲಿ, ಕೊಂಕಣಿ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ, ಮತ್ತು ಉಳ್ಳಾಲದ ಅಸೈಗೋಳಿಯಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ದೇರೆಬೈಲ್‌ನಲ್ಲಿ 3.285 ಎಕರೆ ಭೂಮಿಯಲ್ಲಿ “ಟೆಕ್ ಪಾರ್ಕ್” ನಿರ್ಮಾಣ ಯೋಜನೆ ಅನುಮೋದನೆಯಾಗಿದ್ದು, ಸ್ಥಳೀಯ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ನಿರೀಕ್ಷೆ ಇದೆ. ಸಂಚಾರ ದಟ್ಟಣೆ ತಗ್ಗಿಸಲು ತಲಪಾಡಿ–ಸುರತ್ಕಲ್ ರಿಂಗ್ ರೋಡ್ ನಿರ್ಮಾಣ ಯೋಜನೆ ರೂಪಿಸಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ, ಜಿಲ್ಲಾ ವೆನ್ಹಾಕ್ ಆಸ್ಪತ್ರೆಯಲ್ಲಿ ನೂತನ ಕ್ಯಾಥ್ ಲ್ಯಾಬ್ ಪ್ರಾರಂಭಗೊಂಡಿದ್ದು, ರೂ. 90 ಕೋಟಿ ವೆಚ್ಚದ ಹೊಸ ಹೊರರೋಗಿ ವಿಭಾಗ (ಒಪಿಡಿ) ನಿರ್ಮಾಣಕ್ಕೆ ಅನುಮೋದನೆ ದೊರೆತಿದೆಎಂದು ವಿವರಿಸಿದರು.

ಗೃಹ ಜ್ಯೋತಿ ಯೋಜನೆಯಡಿ 5.51 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದು, ಇದುವರೆಗೆ ರೂ. 789 ಕೋಟಿ ಪಾವತಿಸಲಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ 11.01 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದಿಂದ ಲಾಭ ಪಡೆದಿದ್ದು, ರೂ. 373.81 ಕೋಟಿ ವೆಚ್ಚವಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 3.79 ಲಕ್ಷ ಮಹಿಳೆಯರಿಗೆ ರೂ. 1377 ಕೋಟಿ ಸಹಾಯಧನ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 11.76 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆ.ಜಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಯುವನಿಧಿ ಯೋಜನೆ ಅಡಿಯಲ್ಲಿ 5283 ಯುವಕ–ಯುವತಿಯರಿಗೆ ರೂ. 9.54 ಕೋಟಿ ಮೊತ್ತದ ನೆರವು ನೀಡಲಾಗಿದೆ. ಅಮೃತ್ ನಗರೋತ್ಥಾನ ಹಂತ–4 ಯೋಜನೆಯಡಿ 13 ನಗರ ಸಂಸ್ಥೆಗಳಿಗೆ ರೂ. 110 ಕೋಟಿ ಮಂಜೂರಾಗಿ 144 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

7 ಇಂದಿರಾ ಕ್ಯಾಂಟೀನ್:
ಇಂದಿರಾ ಕ್ಯಾಂಟೀನ್ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 19 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಮತ್ತಷ್ಟು 7 ಕ್ಯಾಂಟೀನ್ ಪ್ರಾರಂಭ ಪ್ರಕ್ರಿಯೆ ನಡೆದಿದೆ. ವಸತಿ ಯೋಜನೆ ಅಡಿಯಲ್ಲಿ 3541 ಫಲಾನುಭವಿಗಳ ಪೈಕಿ 2969 ಮನೆಗಳು ಪೂರ್ಣಗೊಂಡಿವೆ. ಸುರತ್ಕಲ್–ಇಡ್ಯಾದಲ್ಲಿ ಜಿ+3 ಮಾದರಿಯ 792 ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ವಿವರಿಸಿದರು.

ಮೂಲಸೌಕರ್ಯ ಅಭಿವೃದ್ಧಿ:
ಸೋಮೇಶ್ವರ, ಬಜಪೆ, ಕಿನ್ನಿಗೋಳಿ, ಮೂಲ್ಕಿ, ಮೂಡಬಿದ್ರೆ ಪಟ್ಟಣಗಳಲ್ಲಿ ನೀರು ಸರಬರಾಜು ಕಾಮಗಾರಿಗಳು ಹಾಗೂ ಬಂಟ್ವಾಳ–ಉಳ್ಳಾಲ ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳ್ಳಾಲ ಪಾವೂರು–ಬೋಳಿಯಾರು ವರೆಗೆ ನೇತ್ರಾವತಿ ಎಡದಂಡೆ ಸಂರಕ್ಷಣೆಗೆ ರೂ. 40 ಕೋಟಿ ವೆಚ್ಚದ ಯೋಜನೆ ನಡೆಯುತ್ತಿದೆ. ಜಲಜೀವನ್ ಮಿಷನ್ ಅಡಿಯಲ್ಲಿ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿದ್ದು, 223 ಗ್ರಾಮ ಪಂಚಾಯತ್‌ಗಳು ಎಂ.ಆರ್.ಎಫ್ ಘಟಕ ಸೌಲಭ್ಯ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದ.ಕ ಪಾತ್ರವಾಗಿದೆ.

ಶಿಕ್ಷಣ ವಲಯದಲ್ಲಿ, 18 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (KPS) ಆಗಿ ಮೇಲ್ದರ್ಜೆಗೇರಿಸಲಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದ.ಕ. ಜಿಲ್ಲೆಯ ಸಾಮಾಜಿಕ–ಆರ್ಥಿಕ ಬೆಳವಣಿಗೆಗೆ ಹೊಸ ಚೈತನ್ಯ ತುಂಬಿದ್ದು, ಜನಜೀವನದಲ್ಲಿ ನೇರ ಬದಲಾವಣೆ ತಂದುಕೊಟ್ಟಿವೆ ಎಂದು ವಿವರಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ವಿವಿಧ ಸಂಘ ಸಂಸ್ಥೆಗಳು ಸೇರಿ 95 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಮಂಜುನಾಥ್ ಭಂಡಾರಿ, ಐವನ್ ಡಿಸೋಜಾ, ವಿವಿಧ ಅಕಾಡೆಮಿ, ನಿಗಮ ಮಂಡಳಿ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

