Breaking News!!! ಮಂಗಳೂರು: ನಟೋರಿಯಸ್‌ ರೌಡಿ ಟೊಪ್ಪಿ ನೌಫಾಲ್‌ ಬರ್ಬರ ಹತ್ಯೆ

ಮಂಗಳೂರು: ನಟೋರಿಯಸ್ ರೌಡಿ ಟೊಪ್ಪಿ ನೌಫಾಲ್ (38) ಎಂಬಾತನನ್ನು ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿ ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿದೆ.

ಮೂಲತಃ ಮಂಗಳೂರು ನಗರದ ಬಜಾಲ್ ಫೈಸಲ್ ನಗರ ನಿವಾಸಿಯಾಗಿರುವ ನೌಫಾಲ್‌ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದ. 2017, ಸೆ.25ರಲ್ಲಿ ಫರಂಗಿಪೇಟೆಯಲ್ಲಿ ತಡರಾತ್ರಿ ನಡೆದಿದ್ದ ಜಿಯಾ ಮತ್ತು ಫಯಾಜ್ ಡಬಲ್ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ ನೌಫಾಲ್‌ ಇದೀಗ ಇದೀಗ ಅದೇ ರೀತಿ ಕೊಲೆಗೀಡಾಗಿದ್ದಾನೆ.

ಕರೆದು ಹತ್ಯೆ ಶಂಕೆ
ಟೊಪ್ಪಿ ನೌಫಾಲ್‌ಗೆ ಇಂದು ಬೆಳಿಗ್ಗೆ ಯಾರಿಂದಲೋ ಕರೆ ಬಂದಿದ್ದು, ಆತ ಅವಸರವಸರವಾಗಿ ಸ್ಕೂಟರ್‌ನಲ್ಲಿ ತೆರಳಿದ್ದ ಎನ್ನಲಾಗಿದೆ. ಆದರೆ ಇಂದು ಮಧ್ಯಾಹ್ನ ನೋಡುವಾಗ ಉಪ್ಪಳ ಗೇಟ್ ಬಳಿಯ ರೈಲ್ವೇ ಟ್ರ್ಯಾಕ್‌ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಈತನನ್ನು ಉಪಾಯವಾಗಿ ಕರೆಸಿದ ಎದುರಾಳಿ ತಂಡ ಈ ಕೃತ್ಯ ನಡೆಸಿದೆ ಎನ್ನಲಾಗುತ್ತಿದೆ. ದೇಹದ ಮೇಲೆಲ್ಲಾ ತಲವಾರಿನಿಂದ ಕಡಿದ ಗಾಯದ ಗುರುತುಗಳು ಪತ್ತೆಯಾಗಿದೆ. ಶರ್ಟ್‌ ನಾಪತ್ತೆಯಗಿದ್ದು, ಮೃತದೇಹದಲ್ಲಿ ಪ್ಯಾಂಟ್‌ ಹಾಗೂ ಬನಿಯಾನ್‌ ಕಂಡು ಬಂದಿದೆ. ನೌಫಾಲ್‌ ಹತ್ಯೆಯಾಗುವ ಮುನ್ನ ಈತನಿಗೂ ಎದುರಾಳಿ ತಂಡಕ್ಕೂ ಹೊಡೆದಾಟ ನಡೆದಿದ್ದು, ಇದರಿಂದಲೇ ಶರ್ಟ್‌ ಹರಿದು ಬಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಆರಂಭದಲ್ಲಿ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೆ ಗುರುತಿಸಿಕೊಂಡಿದ್ದ ನೌಫಾಲ್‌, ಇದೀಗ ಪ್ರತ್ಯೇಕ ತಂಡ ಕಟ್ಟಿಕೊಂಡು ತಿರುಗಾಡುತ್ತಿದ್ದ. ಡ್ರಗ್ಸ್‌ ವಹಿವಾಟು ನಡೆಸಿ ಪೊಲೀಸರಿಗೆ ಅನೇಕ ಬಾರಿ ಸಿಕ್ಕಿಬಿದ್ದಿದ್ದ. ಈಚೆಗೆ ಮಂಗಳೂರಿನಲ್ಲಿ ತನ್ನ ಟೀಂ ಜೊತೆಗೆ ಕಿರಿಕ್‌ ಮಾಡಿಕೊಂಡಿದ್ದ ನೌಫಾಲ್‌ ಬಳಿಕ ಕಾಸರಗೋಡಿನಲ್ಲಿ ಹೆಚ್ಚು ಸಮಯ ಇರುತ್ತಿದ್ದ. ಆದರೆ ಅಲ್ಲಿಯೂ ಆತನ ವಿರೋಧ ಕಟ್ಟಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಮಂಗಳೂರಿನಲ್ಲಿ ಪೊಲೀಸರ ಕಿರಿಕಿರಿಯಿಂದ ಉಪ್ಪಳಕ್ಕೆ ಹೋಗಿದ್ದ ನೌಫಾಲ್‌ ಇದೀಗ ಅದೇ ಜಾಗದಲ್ಲಿ ಕೊಲೆಗೀಡಾಗಿರುವುದು ವಿಪರ್ಯಾಸ ಎನಿಸಿದೆ.

ಈತನ ವಿರುದ್ಧ ಕಂಕನಾಡಿ ನಗರ, ವಾಮಂಜೂರು, ಸುರತ್ಕಲ್, ಕಾವೂರು ಸೇರಿ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌

error: Content is protected !!