ಸುರತ್ಕಲ್: ಬಾರಿನಲ್ಲಿ ಕುಡಿಯುತ್ತಿದ್ದ ವೇಳೆ ಉಂಟಾದ ಜಗಳ ಚಾಕು ಇರಿತದೊಂದಿಗೆ ಪರ್ಯವಸಾನಗೊಂಡ ಪ್ರಕರಣದ ಕುರಿತಂತೆ ಪೊಲೀಸರು ಆರೋಪಿಗಳ ಶೋಧಕ್ಕೆ ತಂಡವೊಂದನ್ನು ರಚಿಸಿದ್ದಾರೆ. ಇರಿತಕ್ಕೊಳಗಾದ ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಮುಕ್ಷೀದ್ ಮತ್ತು ನಿಜಾಮ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.


ಆರೋಪಿಗಳಲ್ಲಿ ಓರ್ವ ಸುರತ್ಕಲ್‌ನಲ್ಲಿ ರೌಡಿಶೀಟರ್ ಗುರುರಾಜ್ ಎಂದು ಗುರುತಿಸಲಾಗಿದ್ದು, ಆತ ಬಜರಂಗ ದಳದ ಸಕ್ರಿಯ ಕಾರ್ಯಕರ್ತ. ಗುರುರಾಜ್‌ನ ಸ್ನೇಹಿತ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಪ್ರಕರಣದ ಆರೋಪಿಗಳೆಂದು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ರೆಡ್ಡಿ ತಿಳಿಸಿದ್ದು, ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿದ್ದಾಗಿ ತಿಳಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ನಿನ್ನೆ ರಾತ್ರಿಯೇ ರಚಿಸಲಾದ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಗುರುತಿಸಿದ್ದಾಗಿ ಅವರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:
ಮುಕ್ಷಿದ್, ನಿಜಾಮ್ ಮತ್ತು ಇತರ ಇಬ್ಬರು ಸುರತ್ಕಲ್ ದೀಪಕ್ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಮದ್ಯ ಕುಡಿಯಲು ಬಂದಿದ್ದರು. ಇವರು ಮದ್ಯ ಸೇವಿಸಿ ಕಿಕ್ ತಲೆಗೆ ಹತ್ತಿಕೊಳ್ಳುತ್ತಿದ್ದಂತೆ ಅಲ್ಲಿಯೇ ಬೇರೊಂದು ಟೇಬಲ್‌ನಲ್ಲಿ ಕುಳಿತಿದ್ದ ನಾಲ್ವರ ತಂಡದ ಜೊತೆ ಕಿರಿಕ್ ಆಗಿದೆ. ಇದರ ಮುಂದುವರಿದ ಭಾಗವಾಗಿ ಎರಡೂ ತಂಡದವರು ಪರಸ್ಪರ ವಾಗ್ಯುದ್ಧ ಆರಂಭಿಸಿದ್ದಾರೆ. ಮಾತಿನ ಜಗಳ ಮುಂದುವರೆದ ಹಿನ್ನೆಲೆಯಲ್ಲಿ ಬಾರ್ ಸಿಬ್ಬಂದಿ ಎರಡೂ ತಂಡಗಳನ್ನು ಬಾರಿನಿಂದ ಹೊರಗಡೆ ಕಳಿಸಿದ್ದರು.
ಬಾರಿನಿಂದ ಹೊರಡಗೆ ಬಂದ ಮೇಲೂ ಎರಡೂ ತಂಡದವರು ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಅಪರಿಚಿತರಲ್ಲಿ ಓರ್ವ ವ್ಯಕ್ತಿ ಫ್ಲೆಕ್ಸ್‌ಗಳನ್ನು ಕತ್ತರಿಸಲು ಬಳಸುವ ಚಾಕುವಿನಿಂದ ನಿಜಾಮ್ ಹೊಟ್ಟೆ ಮತ್ತು ಕಿವಿಯ ಬಳಿ ಇರಿದಿದ್ದಾನೆ. ಇದೇ ವೇಳೆ ಜತೆಯಲ್ಲಿದ್ದ ಮುಕ್ಷೀದ್ ಕೈಗೂ ಗಾಯವಾಗಿದೆ. ಆದರೆ ಈ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೀವ್ರ ಗಾಯಗೊಂಡಿರುವ ಮುಕ್ಷೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ಗಾಯಾಳು ಮುಕ್ಷೀದ್ ಆರೋಗ್ಯ ವಿಚಾರಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಕಮಿಷನರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

