ಉತ್ತರಪ್ರದೇಶ: ಪತ್ರಕರ್ತನೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿರುವ ಘಟನೆ ಪ್ರಯಾಗ್‌ರಾಜ್‌ನ ಹೋಟೆಲ್‌ವೊಂದರ ಬಳಿ ನಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಲಕ್ಷ್ಮಿ ನಾರಾಯಣ್ ಸಿಂಗ್ ಹತ್ಯೆಯಾದ ಪತ್ರಕರ್ತ.
“ಹರ್ಷ್ ಹೊಟೇಲ್ ಬಳಿ ಲಕ್ಷ್ಮಿ ನಾರಾಯಣ್ ಸಿಂಗ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಲಕ್ಷ್ಮಿ ನಾರಾಯಣ್ ಸಿಂಗ್ ಅವರು ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಅಶೋಕ್ ಸಿಂಗ್ ಅವರ ಸೋದರಳಿಯ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಎಡಿಸಿಪಿ) ಪುಷ್ಕರ್ ವರ್ಮಾ ತಿಳಿಸಿದ್ದಾರೆ.
ತಡರಾತ್ರಿ ಆರೋಪಿಯ ಕಾಲಿಗೆ ಗುಂಡಿಕ್ಕಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿವೆ. ಪ್ರಾಥಮಿಕ ತನಿಖೆಯು ಆರೋಪಿ ಮತ್ತು ಮೃತ ಪತ್ರಕರ್ತನ ಮಧ್ಯೆ ಇತ್ತೀಚೆಗೆ ಜಗಳವಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ತನಿಖೆ ಬಳಿಕ ನಿಖರವಾದ ಮಾಹಿತಿ ಹೊರ ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
