ಕುಂದಾಪುರ: ನಾಲ್ಕು ತಿಂಗಳ ಹಿಂದೆ ಬಾವಿಗೆ ಬಿದ್ದು ಗಂಡ ಮತ್ತು ಮಗನನ್ನು ಕಳೆದುಕೊಂಡ ದುಃಖದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು, ಸಾಲದ ಚಿಂತೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದಿದೆ.
ಮೃತರನ್ನು ತಾರಾ ದೇವಾಡಿಗ (54) ಎಂದು ಗುರುತಿಸಲಾಗಿದೆ.
ಮೇ ತಿಂಗಳಲ್ಲಿ ತಾರಾ ದೇವಾಡಿಗರ ಪತಿ ಮಾಧವ ದೇವಾಡಿಗ (55) ಹಾಗೂ ಪುತ್ರ ಪ್ರಸಾದ್ ದೇವಾಡಿಗ (22) ಬಾವಿಗೆ ಬಿದ್ದು ಮೃತಪಟ್ಟಿದ್ದರು. ಆ ಸಮಯದಲ್ಲಿ ಪತಿಯನ್ನೂ ಮಗನನ್ನೂ ರಕ್ಷಿಸಲು ಪ್ರಯತ್ನಿಸಿದ ತಾರಾ ದೇವಾಡಿಗ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಅಕ್ಟೋಬರ್ 6ರಂದು ಬೆಳಿಗ್ಗೆ “ಸಾಹೇಬ್ರಕಟ್ಟೆಗೆ ಕೆಲಸಕ್ಕೆ ಹೋಗುತ್ತೇನೆ” ಎಂದು ಮನೆಯಿಂದ ಹೊರಟ ತಾರಾ, ರಾತ್ರಿ ಮನೆಗೆ ಮರಳಿರಲಿಲ್ಲ. ಅಕ್ಟೋಬರ್ 7ರಂದು ಬೆಳಿಗ್ಗೆ 8.30ರ ಸುಮಾರಿಗೆ ತೆಕ್ಕಟ್ಟೆ ಪಂಚಾಯತ್ ಆವರಣದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಗಂಡ ಮತ್ತು ಮಗನ ನಿಧನದ ಆಘಾತದಿಂದ ಚೇತರಿಸಿಕೊಳ್ಳಲಾಗದೆ, ಸಾಲದ ಬಾಧೆಗೂ ಒಳಗಾಗಿ ತೀವ್ರ ಮನೋಯಾತನೆಯಲ್ಲಿದ್ದ ತಾರಾ ದೇವಾಡಿಗರು ವಿಷ ಸೇವಿಸಿ ಜೀವ ಬಲಿದಾನ ಮಾಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.