ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಗಾಂಧಿನಗರ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಅಡುತ್ತಿದ್ದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ತಾಲೂಕಿನ ಕುದಿ ಗ್ರಾಮದ ಕುಂಜೂರು, ಬೈದಬೆಟ್ಟು ನಿವಾಸಿ ಕುಮಾರ ಹೆಗ್ಡೆ (59) ಪ್ರಕರಣದ ಆರೋಪಿ.
ಬಂಧಿತನಿಂದ ಪೊಲೀಸರು ₹815 ನಗದು, ಮಟ್ಕಾ ನಂಬರಗಳನ್ನು ಬರೆದಿರುವ ಚೀಟಿಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾರ್ವಜನಿಕರಿಗೆ “1 ರೂಪಾಯಿಗೆ 70 ರೂಪಾಯಿ ನೀಡುತ್ತೇನೆ(ಒಂಜೆಕ್ಕ್ ಏಳ್)” ಎಂದು ಹೇಳಿ ಜನರಿಂದ ಹಣ ಸಂಗ್ರಹಿಸಿ ಉಲಾಯಿ- ಪಿದಾಯಿ ಆಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಆರೋಪಿ ಕುಮಾರ ಹೆಗ್ಡೆ, ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಒಟ್ಟುಗೂಡಿಸಿ ಕರ್ಜೆಯ ಸಂತೋಷ್ ಶೆಟ್ಟಿ ಎಂಬಾತನಿಗೆ ನೀಡುತ್ತಿದ್ದುದಾಗಿ ಪೊಲೀಸರಿಗೆ ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ಬ್ರಹ್ಮಾವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.