ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ! ತಂದೆ-ಮಗ ಸಾವು, ತಾಯಿ ಗಂಭೀರ

ಉಡುಪಿ : ಜಿಲ್ಲೆಯ ತೆಕ್ಕಟ್ಟೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧವ ದೇವಾಡಿಗ(56), ಹಾಗೂ ಅವರ ಮಗ ಪ್ರಸಾದ್ ದೇವಾಡಿಗ (22) ಮೃತಪಟ್ಟವರು. ತಾಯಿಯ ಪರಿಸ್ಥಿತಿ ಗಂಭೀರವಾಗಿದ್ದು, ಕಂಚುಗಾರುಬೆಟ್ಟು ನಿವಾಸಿ, ತಾರಾ ದೇವಾಡಿಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಂದೆ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದ ತಾಯಿ, ತಾರಾ ದೇವಾಡಿಗ ಅವರು ಬಾವಿಗೆ ಹಾರಿದ್ದು, ಅವರ ಆಕ್ರಂದನದ ಧ್ವನಿ ಕೇಳಿದ ಸ್ಥಳೀಯ ನಿವಾಸಿಗಳಾದ ಸಂತೋಷ್ ಶೆಟ್ಟಿ, ಶ್ರೀನಾಥ್‌ ಶೆಟ್ಟಿ ಹಾಗೂ ಸ್ಥಳೀಯರು ರಕ್ಷಣೆಗೆ ಧಾವಿಸಿದರು. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು ಬಡ ಕುಟುಂಬಕ್ಕೆ ಸಾಲಬಾಧೆ ಕಾಡುತ್ತಿರುವುದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

error: Content is protected !!