ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಗೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದರು..
ಮಾಲಿನ್ಯಕ್ಕೆ ಸಂಬಂಧಪಟ್ಟ ನಿಯಮಗಳನ್ನು ಪಾಲಿಸದ ಹಿನ್ನೆಲೆ ನೋಟಿಸ್ ಕೊಟ್ಟು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿ, ಅದರ ಒಳಗಿದ್ದ ʼಬಿಗ್ ಬಾಸ್ʼ ಮನೆಯನ್ನು ಬಂದ್ ಮಾಡಲಾಗಿತ್ತು. ಈ ಕಾರಣದಿಂದ ಸ್ಪರ್ಧಿ ಹಾಗೂ ಸಿಬ್ಬಂದಿಯನ್ನು ರಾತ್ರೋರಾತ್ರಿ ಖಾಸಗಿ ಹೊಟೇಲ್ ಗೆ ಶಿಫ್ಟ್ ಮಾಡಲಾಗಿತ್ತು.
ಈ ಸಂಬಂಧ ಜಾಲಿವುಡ್ ಸ್ಟುಡಿಯೋಸ್ನ ಮಾತೃ ಸಂಸ್ಥೆ ವೆಲ್ಸ್ ಸ್ಟುಡಿಯೋಸ್ನವರು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಸಲ್ಲಿಕೆ ಮಾಡಿತ್ತು. ಕಾಲಾವಕಾಶ ನೀಡಿ ಎಂದು ಮಾಡಿದ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಿದ್ದು, ಆ ಮೂಲಕ ʼಬಿಗ್ ಬಾಸ್ʼಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಜಿಲ್ಲಾಧಿಕಾರಿ 10 ದಿನಗಳ ಕಾಲಾವಕಾಶವನ್ನು ನೀಡಿದ್ದು, ಇದರ ಬೆನ್ನಲ್ಲೇ ʼಬಿಗ್ ಬಾಸ್ ಕನ್ನಡ -12ʼ ಮತ್ತೆ ಆರಂಭಗೊಳ್ಲೂವ ಸಾಧ್ಯತೆಯಿದೆ. ಇಂದೇ ಬಿಗ್ ಬಾಸ್ ಸ್ಪರ್ಧಿಗಳನ್ನು ದೊಡ್ಮನೆಗೆ ಕರೆದುಕೊಂಡು ಹೋಗುತ್ತಾರೋ ಅಥವಾ 10 ದಿನಗಳ ಬಳಿಕ ಸಮಸ್ಯೆ ಬಗೆಹರಿದ ಬಳಿಕ ಶೋ ಆರಂಭ ಆಗುತ್ತದೋ ಎನ್ನುವುದನ್ನು ಕಾದುನೋಡಬೇಕಿದೆ.
ಇಂದಿನ ಸಂಚಿಕೆಯ ಪ್ರೋಮೋಗಳು ಈಗಾಗಲೇ ರಿಲೀಸ್ ಆಗಿವೆ. ಆದರೆ ನಾಳೆಯ ಸಂಚಿಕೆಗಳಿಗೆ ಕಂಟೆಂಟ್ ಇಲ್ಲವೆನ್ನಲಾಗುತ್ತಿದೆ. ಒಂದು ವೇಳೆ ಸ್ಪರ್ಧಿಗಳು ಮನೆಯೊಳಗೆ ಹೋದರೆ ಶೋ ಮತ್ತೆ ಮುಂದುವರೆಯುವುದು ಪಕ್ಕಾ.