ಮಂಗಳೂರು: ಮಂಗಳೂರಿನ ಕದ್ರಿ ಕೈಬಟ್ಟಲಿನಲ್ಲಿ ಈಗ ಚಿರತೆಯದ್ದೇ ದರ್ಬಾರ್. ಡಾಕ್ಟರ್ಸ್ ಲೇನ್‌ನಲ್ಲಿರುವ ಡಾಕ್ಟರುಗಳಿಗಿಂತ ಹೆಚ್ಚಾಗಿ ಈಗ ಈ ಚಿರತೆಯೇ ಫೇಮಸ್ ಆಗಿಬಿಟ್ಟಿದೆ. ಮೊನ್ನೆ ರಾತ್ರಿ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದ ಚಿರತೆಯ ಬಿಲ್ಡಪ್ ಕಂಡು ಫಾರೆಸ್ಟ್ ಡಿಪಾರ್ಟ್‌ಮೆಂಟ್‌ನವರೇ ಬೆಚ್ಚಿಬಿದ್ದಿದ್ದರು. ಈ ಚಿರತೆಯನ್ನು ಹೇಗಾದರೂ ಮಾಡಿ ಹಿಡಿಯಲೇಬೇಕು ಅಂತ ಅರಣ್ಯ ಇಲಾಖೆಯವರು ʻಆಪರೇಷನ್ ಕೈಬಟ್ಟಲು’ ಶುರು ಮಾಡಿದರು.

ಅರಣ್ಯ ಇಲಾಖೆಯ ಸೈನಿಕರು ಬಹಳ ಬುದ್ಧಿವಂತರು. “ನೋಡು ಮಗನೇ ಚಿರತೆ, ಇವತ್ತು ನಿನಗೆ ಹಬ್ಬ” ಎಂದು ನಾಗಬನದ ಹತ್ತಿರ ಒಂದು ಭರ್ಜರಿ ಬೋನು ಇಟ್ಟು, ಒಳಗಡೆ ಅದರ ಫೇವರಿಟ್ ಮೆನು(ಕೋಳಿ) ಇಟ್ಟು ಕಾದು ಕುಳಿತಿದ್ದರು. ಪಾಪ, ಗುರುವಾರ ಬೆಳಗ್ಗೆ ಹೋಗಿ ನೋಡಿದರೆ ನಗ್ಬೇಕೋ ಅಳ್ಬೇಕೋ ಅಂತ ಅರಣ್ಯ ಇಲಾಖೆಯವರು ಪೇಲವವಾಗಿ ನಕ್ಕಿದ್ದಾರೆ. ಯಾಕೆಂದರೆ ಚಿರತೆ ಬಂದು ಬೀಳಬೇಕಿದ್ದ ಜಾಗದಲ್ಲಿ ಯಾವುದೋ ಒಂದು ಬೀದಿ ನಾಯಿ, “ನನ್ನನ್ನು ಯಾಕೆ ಇಲ್ಲಿ ಕೂರಿಸಿದ್ದೀರಾ ಸಾರ್?” ಅನ್ನೋ ಹಾಗೆ ಮುಗ್ಧವಾಗಿ ಮುಖ ಮಾಡಿಕೊಂಡು ಕುಳಿತಿತ್ತು.

ನಾಯಿ ನೋಡಿ ಅಲ್ಲಿರುವ ಜನರೆಲ್ಲಾ ಗಹಗಹಿಸಿ ನಕ್ಕಿದ್ದಾರೆ. ಬಹುಶಃ ಆ ಚಿರತೆ ಪಕ್ಕದ ಗಿಡದ ಮರೆಯಲ್ಲೇ ನಿಂತು, “ನನ್ನ ರೇಂಜ್ ಗೊತ್ತಾ? ನಾನು ಬೋನಿಗೆ ಬೀಳಲು ನಿಮ್ಮ ಇಲಾಖೆಯ ನಾಯಿನಾ?” ಅಂತ ಕಾಲೆಳೆದು ಹೋಗಿರಬೇಕು. ಈ ಮಧ್ಯೆ ಪಂಪ್‌ವೆಲ್‌ನಲ್ಲಿ ಒಬ್ಬರಿಗೆ ಚಿರತೆ ಕಂಡಿದೆ ಅಂತೆ, ಇನ್ನು ಕೆಲವರಿಗೆ ಏರ್‌ಪೋರ್ಟ್ ಹತ್ತಿರ ಕಾಣಿಸಿಕೊಂಡಿದೆ ಅಂತೆ. ಮಂಗಳೂರಿನಲ್ಲಿ ಈಗ ಮನುಷ್ಯರಿಗಿಂತ ಹೆಚ್ಚಾಗಿ ಚಿರತೆಗಳೇ ʻಸೈಟ್ ಸೀಯಿಂಗ್’ ಹೊರಟಂತಿದೆ.
ಈ ನಾಯಿಯ ಕಿತಾಪತಿಯಿಂದ ಆಪರೇಷನ್ ಕೈಬಟ್ಟಲು ಈಗ ʻಆಪರೇಷನ್ ನಾಯಿಮರಿ’ ಆಗಿಬಿಟ್ಟಿದೆ.
