ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖಂಡರಾಗಿದ್ದಂತಹ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದ ಪ್ರೊ.ನರಹರಿ(93) ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು(ಅ.8) ಬೆಳಗಿನ ಜಾವ 4.30ಕ್ಕೆ ಬೆಂಗಳೂರಿನಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ತುರ್ತು ಪರಿಸ್ಥಿತಿಯ ವಿರುದ್ಧವೂ ಹೋರಾಟ ಮಾಡಿ ಸೆರೆಮನೆವಾಸವನ್ನೂ ಅನುಭವಿಸಿದ್ದರು. ನರಹರಿ ಅವರ ನಿಧನಕ್ಕೆ ಸಂಘದ ಪ್ರಮುಖರು, ಬಿಜೆಪಿ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.