ಮಂಗಳೂರು: ನಗರದ ಕುಂಟಿಕಾನ ಪರಿಸರದಲ್ಲಿ ಶಾಲಾ ಮಕ್ಕಳ ಅಪಹರಣ ನಡೆಯುತ್ತಿದೆ ಎಂಬ ಆಧಾರರಹಿತ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.

ತನಿಖೆಯಿಂದ ಬಯಲಾದ ಸತ್ಯ:
ವಾಟ್ಸಾಪ್ ಸೇರಿದಂತೆ ವಿವಿಧೆಡೆ ಹರಡುತ್ತಿದ್ದ ಧ್ವನಿ ಸಂದೇಶದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸಿದ್ದು, ಈ ಕೆಳಗಿನ ಸತ್ಯಾಂಶಗಳನ್ನು ಕಮಿಷನರ್ ಬಿಡುಗಡೆ ಮಾಡಿದ್ದಾರೆ. ಯಾವುದೇ ದೂರು ದಾಖಲಾಗಿಲ್ಲ, ಮಂಗಳೂರು ನಗರದ ಯಾವುದೇ ಭಾಗದಲ್ಲಿ ಮಕ್ಕಳ ನಾಪತ್ತೆ ಕುರಿತು ಯಾವುದೇ ಅಧಿಕೃತ ದೂರುಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಆಡಿಯೋ ಹಿಂದಿನ ಸತ್ಯ:
ವಾಯ್ಸ್ ಮೆಸೇಜ್ ಹರಿಬಿಟ್ಟಿದ್ದ ಮಹಿಳೆಯನ್ನು ಪೊಲೀಸರು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ, “ರಸ್ತೆಯಲ್ಲಿ ಕೆಲವು ವಿದ್ಯಾರ್ಥಿಗಳು ಮಾತನಾಡಿಕೊಳ್ಳುತ್ತಿದ್ದ ವಿಷಯವನ್ನು ಕೇಳಿಸಿಕೊಂಡು ನಾನು ಈ ಆಡಿಯೋ ಮಾಡಿದ್ದೆ” ಎಂದು ಹೇಳಿಕೆ ನೀಡಿದ್ದಾರೆ. ಅಂದರೆ, ಆಕೆ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿಲ್ಲ, ಬದಲಿಗೆ ಕೇವಲ ಕೇಳಿಬಂದ ಮಾತಿನ ಆಧಾರದ ಮೇಲೆ ಆಡಿಯೋ ಹಂಚಿಕೊಂಡಿದ್ದಾರೆ.
ವದಂತಿ ಹಬ್ಬಿಸಿದರೆ ಕಾನೂನು ಕ್ರಮ:
“ಸಾರ್ವಜನಿಕರು ಅನಗತ್ಯವಾಗಿ ಭಯಭೀತರಾಗುವ ಅಗತ್ಯವಿಲ್ಲ. ಕಿಡ್ನಾಪ್ ಹೆಸರಿನಲ್ಲಿ ಹರಡುತ್ತಿರುವ ಇಂತಹ ನಕಲಿ ಸಂದೇಶಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ. ಪೋಷಕರು ಗಾಬರಿಯಾಗದೆ, ಇಂತಹ ಸಂದೇಹಾಸ್ಪದ ಮಾಹಿತಿಗಳು ಬಂದಾಗ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
