ಗಂಗಾವತಿ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕೆ ವೆಂಕಟೇಶ್ ಜಂತಗಲ್ (32) ಅವರ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ನಗರದ ರಾಣಾ ಪ್ರತಾಪ್ ಸಿಂಗ್ ಸರ್ಕಲ್ ಹತ್ತಿರ ಇರುವ ರಿಲಯನ್ಸ್ ಮಾರ್ಟ್ ಬಳಿ ಮಂಗಳವಾರ(ಅ.7) ಮಧ್ಯರಾತ್ರಿ ನಡೆದಿದೆ.
ಒಂದು ಗಂಟೆ ಸುಮಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಬೈಕ್ ಮೇಲೆ ತೆರಳುತ್ತಿದ್ದ ವೆಂಕಟೇಶನನ್ನು ಕಾರಿನಲ್ಲಿ ಬಂದ ಅಪರಿಚಿತ ಯುವಕರ ತಂಡ ಮಚ್ಚು ಲಾಂಗುಗಳಿಂದ ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ್ದು ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾನೆ. ನಂತರ ವೆಂಕಟೇಶ್ ಜೊತೆಗಿದ್ದ ಕೆಲವರು ಆತನನ್ನು ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರನ್ನು ನಗರದ ಆನೆಗೊಂದಿ ರಸ್ತೆಯಲ್ಲಿರುವ ಪಿಎಲ್ಡಿ ಬ್ಯಾಂಕ್ ಎದುರಿನ ವಿಜಯನಗರ ಕಾಲೋನಿ ಬಳಿ ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಯಾದ ಕೆ.ವೆಂಕಟೇಶ ಮಾಜಿ ಶಾಸಕ ಪರಣ್ಣ ಮುನವಳ್ಳಿ ಆಪ್ತರಾಗಿದ್ದು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಸ್ಥಳೀಯ ವರದಿಗಾರನಾಗಿಯೂ ಕೆಲಸ ನಿರ್ವಹಿಸುತ್ತಿದ್ದರು, ಗಂಗಾವತಿ ನಗರದಲ್ಲಿ ನಡೆದಿದ್ದ ಕೋಮುಸಂಘರ್ಷದ ಸಂದರ್ಭದಲ್ಲಿ ಈತನ ಮೇಲೆಯೂ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ,ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಯಾದ ಕೆ.ವೆಂಕಟೇಶ ಅವರ ತಂದೆ ಹಂಪಣ್ಣ ದೂರು ನೀಡಿದ್ದು, ಕೊಲೆಗಾರರನ್ನುಬಂಧಿಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕುರುಬ ಸಮಾಜದ ಅಧ್ಯಕ್ಷ ಯಮನಪ್ಪ ವಿಠಲಾಪೂರ, ಮುಖಂಡರಾದ ಸಣ್ಣಕ್ಕಿ ನೀಲಪ್ಪ,ಜೋಗದ ನಾರಾಯಣಪ್ಪ, ಹನುಮಂತಪ್ಪ ಜೋಗದ,ಕೆ.ವೆಂಕಟೇಶ, ಕೆ.ನಾಗೇಶಪ್ಪ ಸೇರಿ ಇತರ ಮುಖಂಡರು ಪೊಲೀಸ್ ಠಾಣೆಯಲ್ಲಿ ಎಸ್ಪಿ ಅವರನ್ನು ಭೇಟಿಯಾಗಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.