ಮೈಸೂರು: ಕರ್ನಾಟಕ ರಾಜಕಾರಣದ ಚದುರಂಗದಾಟದಲ್ಲಿ ಗುಪ್ತ ಪತ್ರಗಳ ʻಬ್ರಹ್ಮಾಸ್ತ್ರ’ಗಳು ಪ್ರಯೋಗವಾಗುತ್ತಲೇ ಇವೆ. ವಿಧಾನಸೌಧದ ಮೂರನೇ ಮಹಡಿಯ ಆ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಪರವಾಗಿ ಈಗ ಮೈಸೂರಿನ ಗಲ್ಲಿಯಿಂದ ದೆಹಲಿಯ ಖರ್ಗೆ ದರ್ಬಾರ್‌ವರೆಗೆ ಒಂದು ನಡುಕ ಶುರುವಾಗಿದೆ. ಅದರ ಹೆಸರು- ʻಆಪರೇಷನ್ ಭಾಗ್ಯರಾಜ್’!

ಯಾರು ಈ ಭಾಗ್ಯರಾಜ್? ಏನಿದು ಗುಪ್ತ ಪತ್ರದ ಸಮಾಚಾರ?
ಮೈಸೂರು ಜಿಲ್ಲಾ ಕಾಂಗ್ರೆಸ್‌ನ ಆಳ-ಅಗಲ ತಿಳಿದಿರುವ ಕೆ.ಪಿ. ಭಾಗ್ಯರಾಜ್ ಎಂಬ ಕಾರ್ಯಕರ್ತ ಸದ್ದಿಲ್ಲದೆ ಒಂದು ಪತ್ರ ಬರೆದಿದ್ದಾರೆ. ಅದು ಕೇವಲ ಪತ್ರವಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನಿದ್ದೆಗೆಡಿಸುವ ʻಟೈಮ್ ಬಾಂಬ್’. “ಕಾಂಗ್ರೆಸ್ ಉಳಿಯಬೇಕಾ? ಕಾರ್ಯಕರ್ತರು ಬದುಕಬೇಕಾ? ಹಾಗಿದ್ದರೆ ತಕ್ಷಣ ಡಿಕೆಶಿಯನ್ನು ಸಿಎಂ ಮಾಡಿ!”- ಇದು ಆ ಪತ್ರದ ಸಾರಾಂಶ.
ತಿಹಾರ್ ಜೈಲು ಮತ್ತು ತ್ಯಾಗದ ಕಣ್ಣೀರು:
ಭಾಗ್ಯರಾಜ್ ತನ್ನ ಪತ್ರದಲ್ಲಿ ಹಳೆಯ ಗಾಯಗಳನ್ನು ಕೆದಕಿದ್ದಾರೆ. ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಿ, ಅಹ್ಮದ್ ಪಟೇಲರ ಗೌರವ ಉಳಿಸಲು ಹೋಗಿ ಡಿಕೆಶಿ ತಿಹಾರ್ ಜೈಲಿನ ಕತ್ತಲ ಕೋಣೆಯಲ್ಲಿ ಕಳೆದ ಆ ದಿನಗಳನ್ನು ನೆನಪಿಸಿದ್ದಾರೆ. “ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪಾರ್ಟಿ ಉಳಿಸಿದ ಮನುಷ್ಯನಿಗೆ ಸಿಗಬೇಕಾದ ನ್ಯಾಯ ಎಲ್ಲಿದೆ?” ಎಂಬ ಪ್ರಶ್ನೆ ಈಗ ದೆಹಲಿಯ ಹೈಕಮಾಂಡ್ ಹಜಾರದಲ್ಲಿ ಪ್ರತಿಧ್ವನಿಸುತ್ತಿದೆ. ಅಂದು ವಿಲಾಸರಾವ್ ದೇಶಮುಖ್ ಸರ್ಕಾರ ಉರುಳದಂತೆ ತಡೆದಿದ್ದೇ ಇದೇ ಡಿಕೆಶಿ ಎಂಬ ಇತಿಹಾಸದ ಪುಟಗಳನ್ನು ಮೈಸೂರಿನ ಈ ಕಾರ್ಯಕರ್ತ ಖರ್ಗೆಯವರ ಮುಂದೆ ತೆರೆದಿಟ್ಟಿದ್ದಾರೆ.

31 ಶಾಸಕರ ನಡುಕ.. ಮೈಸೂರಿನ ಹಠ!
ಒಂದೆಡೆ 31 ಶಾಸಕರು ನಾಯಕತ್ವ ಬದಲಾವಣೆಯ ಗದ್ದಲದ ನಡುವೆ ಹೈಕಮಾಂಡ್‌ಗೆ ಪತ್ರ ಬರೆದು ಕಾಯುತ್ತಿದ್ದರೆ, ಈ ಕಡೆ ಮೈಸೂರಿನ ಈ ʻಭಾಗ್ಯ’ವಂತ ಕಾರ್ಯಕರ್ತ ಹಾಕಿದ ಅಸ್ತ್ರ ಇಡೀ ಸಿದ್ದರಾಮಯ್ಯ ಕ್ಯಾಂಪ್‌ನಲ್ಲಿ ನಡುಕ ಹುಟ್ಟಿಸಿದೆ. 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಸೇನಾಧಿಪತಿಗೆ ಪಟ್ಟಾಭಿಷೇಕ ಮಾಡದಿದ್ದರೆ ಕಾಂಗ್ರೆಸ್ ಭವಿಷ್ಯ ಭಸ್ಮವಾಗಬಹುದು ಎಂಬ ಎಚ್ಚರಿಕೆ ಈ ಪತ್ರದಲ್ಲಿದೆ.
ಇದು ಕೇವಲ ಒಬ್ಬ ಕಾರ್ಯಕರ್ತನ ಕೂಗಲ್ಲ, ಇದು ಸದ್ದಿಲ್ಲದೆ ನಡೆಯುತ್ತಿರುವ ದೊಡ್ಡದೊಂದು ‘ಆಪರೇಷನ್’ನ ಮುನ್ಸೂಚನೆ. ರಾಜಕೀಯದ ಈ ಕಗ್ಗಂಟಿನಲ್ಲಿ ಡಿಕೆಶಿ ಅಂದುಕೊಂಡಿದ್ದನ್ನು ಸಾಧಿಸುತ್ತಾರಾ? ಅಥವಾ ಈ ಪತ್ರಗಳು ಕಸದ ಬುಟ್ಟಿ ಸೇರುತ್ತವಾ? ಕಾದು ನೋಡಿ, ಮೈಸೂರಿನಿಂದ ಶುರುವಾದ ಈ ಕಿಚ್ಚು ದೆಹಲಿಯನ್ನು ಸುಡುತ್ತಾ ಅಥವಾ ಬೆಂಗಳೂರನ್ನು ತಣಿಸುತ್ತಾ ಅಂತ!
