ಮಂಗಳೂರು: ಬಂದರು ನಿವಾಸಿಯೊಬ್ಬರ ಬ್ಯಾಂಕ್ ಖಾತೆಯನ್ನು ವಂಚನೆಗೆ ಬಳಸಿಕೊಂಡಿದ್ದ ಅಂತಾರಾಜ್ಯ ಸೈಬರ್ ಕ್ರೈಂ ಜಾಲವನ್ನು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ತಂಡವು ಪತ್ತೆಹಚ್ಚಿದೆ. ಹೈದರಾಬಾದ್‌ನಲ್ಲಿ ಐವರು ಹಾಗೂ ಮಂಗಳೂರಿನಲ್ಲಿ ಓರ್ವ ಆರೋಪಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.





ಆಂಧ್ರಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ @ ರಸೂಲ್ (27) , ಕರ್ನೂಲ್‌ನ ಬುಡಿದಿನ್ನೆ ವಂಶಿ @ ಗುರು (21) , ತೆಲಂಗಾಣದ ಹೈದರಾಬಾದ್‌ನ ಪಂಡಿತಿ ಕ್ರಾಂತಿ ಕುಮಾರ್ (36) , ಮಂಗಳೂರಿನ ಮುಲ್ಕಿ ನಿವಾಸಿ ಇಬ್ರಾಹಿಂ (35) , ಹೈದರಾಬಾದ್‌ನ ಬಡೆ ಶ್ರೀನಿವಾಸ್ (38) ಮತ್ತು ನೆಲ್ಲೂರಿನ ಉತ್ಸಲ ಸಂತೋಷ್ ಕೃಷ್ಣ (35) ಬಂಧಿತ ಆರೋಪಿಗಳು. ಇವರು ಸಾಮಾಜಿಕ ಮಾಧ್ಯಮಗಳ ಮೂಲಕ ಬ್ಯಾಂಕ್ ಖಾತೆದಾರರಿಗೆ ಕಮಿಷನ್ ಆಮಿಷವೊಡ್ಡಿ ವಂಚನೆ ಎಸಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ
ಮಂಗಳೂರಿನ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬುವವರಿಗೆ ಅವರ ಸ್ನೇಹಿತ ಇಬ್ರಾಹಿಂ ಎಂಬಾತನು ವ್ಯವಹಾರದ ಉದ್ದೇಶಕ್ಕೆಂದು ಬ್ಯಾಂಕ್ ಖಾತೆಯನ್ನು ಕೇಳಿದ್ದನು. ಇದನ್ನು ನಂಬಿದ ಇಕ್ಬಾಲ್ ತಮ್ಮ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಏರ್ಟೆಲ್ ಸಿಮ್ ಕಾರ್ಡ್ ನೀಡಿದ್ದರು. ಆದರೆ, ಈ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಬಂಧಿತ ಆರೋಪಿಗಳಿಂದ ಪೊಲೀಸರು ಒಟ್ಟು 18 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 12 ಸಿಮ್ ಕಾರ್ಡ್‌ಗಳು ಮತ್ತು 18 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ವಂಚನೆಗೆ ಬಳಸಲಾದ ಬ್ಯಾಂಕ್ ಖಾತೆಗಳ ವಿವರಗಳನ್ನು ಸಹ ತನಿಖಾ ತಂಡವು ಸಂಗ್ರಹಿಸಿದೆ.
ಆಘಾತಕಾರಿ ವಂಚನಾ ವಿಧಾನ: ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಆಕರ್ಷಕ ಜಾಹೀರಾತು ನೀಡಿ, ಬ್ಯಾಂಕ್ ಖಾತೆದಾರರಿಗೆ ಶೇ. 4 ರಿಂದ 6 ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ದುರಾಸೆಗೊಳಗಾದವರಿಂದ ಖಾತೆ ವಿವರ ಮತ್ತು ಓಟಿಪಿ ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು. ತನಿಖೆಯ ವೇಳೆ ಇವರಿಂದ ಒಟ್ಟು 72 ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿದ್ದು, ಇವುಗಳ ಮೇಲೆ ದೇಶಾದ್ಯಂತ 272ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ವಿಶೇಷವೆಂದರೆ, ಫೆಬ್ರವರಿ 26, 2026ರಂದು ಒಂದೇ ದಿನ ಈ ತಂಡವು 2 ಕೋಟಿ ರೂಪಾಯಿಗೂ ಅಧಿಕ ಹಣದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.
