ಅನಂತ್ ಕುಮಾರ್ ಹೆಗಡೆ ರಾಜ್ಯ ರಾಜ್ಯಕಾರಣ ಮರುಪ್ರವೇಶಕ್ಕೆ ಕೌಂಟ್ ಡೌನ್ ಶುರು!

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ರಾಜಕೀಯದ ಮೌನದ ಮುಖವಾಡ ಧರಿಸಿದ್ದ ಉತ್ತರ ಕನ್ನಡದ ಫೈರ್ ಬ್ರ್ಯಾಂಡ್ ನಾಯಕ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರಾ? ರಾಜಕೀಯ ಪಡಸಾಲೆಯಲ್ಲಿ ಸದ್ಯ ದಟ್ಟವಾಗಿ ಹಬ್ಬಿರುವ ಈ ವದಂತಿ ಈಗ ಕೇಸರಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಅನಂತ್ ಕುಮಾರ್ ಹೆಗಡೆ ಅವರ ರಾಜಕೀಯ ಹೋರಾಟಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಭಟ್ಕಳವೇ ಈಗ ಅವರ ಎರಡನೇ ಇನ್ನಿಂಗ್ಸ್‌ಗೂ ವೇದಿಕೆಯಾಗುತ್ತಿದೆ. ಮುಂದಿನ ತಿಂಗಳು ಮಾರ್ಚ್ 8ರಂದು ಭಟ್ಕಳದಲ್ಲಿ ನಡೆಯಲಿರುವ ಬೃಹತ್ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಚ್ಚರಿಯ ವಿಷಯವೆಂದರೆ, ಸಂಘ ಪರಿವಾರದ ಹಿರಿಯ ನಾಯಕರೇ ಖುದ್ದಾಗಿ ಹೆಗಡೆಯವರ ಮನವೊಲಿಸಿ ಅಖಾಡಕ್ಕೆ ಕರೆತರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಲವು ತಿಂಗಳುಗಳಿಂದ ಸಂಘಟನಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಹೆಗಡೆ, ಮತ್ತೆ ಸಕ್ರಿಯರಾಗುತ್ತಿರುವುದು ವಿರೋಧ ಪಕ್ಷಗಳಲ್ಲಿಯೂ ನಡುಕ ಹುಟ್ಟಿಸಿದೆ. ಕರಾವಳಿ ಭಾಗದಲ್ಲಿ ಹೆಗಡೆಯವರ ಪ್ರಭಾವ ಮತ್ತು ಅವರ ಆಕ್ರಮಣಕಾರಿ ಭಾಷಣದ ಶೈಲಿ ಬಿಜೆಪಿಯ ಕೆಳಮಟ್ಟದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವುದರಲ್ಲಿ ಸಂಶಯವಿಲ್ಲ. ಅಭಿಮಾನಿಗಳ ಪ್ರಕಾರ, ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಹೆಗಡೆಯವರ ರಾಜಕೀಯ ಮರುಜನ್ಮದ ʻಟೀಸರ್’!

ಹಿಂದೂ ಸಂಗಮದ ಆಯೋಜಕರು ಮತ್ತು ಸಂಘದ ಪ್ರಮುಖರು ಹೆಗಡೆಯವರ ಜೊತೆ ಗುಪ್ತವಾಗಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ರಾಜ್ಯ ರಾಜಕಾರಣದಲ್ಲಿ ಹಿಂದುತ್ವದ ಅಜೆಂಡಾವನ್ನು ಮತ್ತಷ್ಟು ಗಟ್ಟಿಗೊಳಿಸಲು ಹೆಗಡೆಯವರಂತಹ ನಾಯಕನ ಅನಿವಾರ್ಯತೆ ಇದೆ ಎಂದು ಹಿರಿಯರು ಭಾವಿಸಿದ್ದಾರೆ. ಆ ಕಾರಣಕ್ಕಾಗಿಯೇ ಅವರ ಮರುಪ್ರವೇಶಕ್ಕೆ ಈ ಬೃಹತ್ ವೇದಿಕೆ ಸಿದ್ಧವಾಗಿದೆ.

ಮಾರ್ಚ್ 8ರ ಆ ದಿಕ್ಸೂಚಿ ಭಾಷಣದಲ್ಲಿ ಹೆಗಡೆ ಯಾವ ಬಾಂಬ್ ಸಿಡಿಸಲಿದ್ದಾರೆ? ಅವರ ಮುಂದಿನ ರಾಜಕೀಯ ನಡೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಭಟ್ಕಳದ ವೇದಿಕೆಯೇ ಉತ್ತರ ನೀಡಲಿದೆ.

error: Content is protected !!