ಕಂಕನಾಡಿ–ಪಂಪ್‌ವೆಲ್ ರಸ್ತೆಯಲ್ಲಿ ಗುಂಡಿಗಳೇ ಇಲ್ಲ, ಅಲ್ಲಿರುವುದು ಬಾವಿಗಳು! 

ಮಂಗಳೂರು: ಕಂಕನಾಡಿ ಸಿಗ್ನಲ್‌ನಿಂದ ಪಂಪ್‌ವೆಲ್‌ ಕಡೆಗೆ ಹೋಗುವ ರಸ್ತೆಯ ಸ್ಥಿತಿಯನ್ನು ಈ ಕಣ್ಣಿನಿಂದ ನೋಡುವಂತಿಲ್ಲ. ಯಾಕೆಂದರೆ ಇಲ್ಲಿ ಗುಂಡಿಗಳೇ ಇಲ್ಲ. ಬದಲಿಗೆ ಇಲ್ಲಿರುವು ಬಾವಿಗಳು! ಬಾವಿಯಂತಿರುವ ಗುಂಡಿಗಳು, ನೀರು ತುಂಬಿದ ಕುಳಿಗಳು — ಜನರ ಜೀವಕ್ಕೆ ನೇರ ಬೆದರಿಕೆ! ಆದರೆ ಮಹಾನಗರ ಪಾಲಿಕೆ ಮಾತ್ರ ಕಣ್ಣೆತ್ತಿ ನೋಡುವ ಸ್ಥಿತಿಯಲ್ಲಿರದೆ ಇನ್ನೂ ನಿದ್ರಾ ಮೋಡ್‌ನಲ್ಲೇ ಇದೆ!

ಪ್ರತಿದಿನ ನೂರಾರು ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ಹಾದು ಹೋಗುತ್ತಾರೆ. ಒಂದು ತಪ್ಪು ತಿರುಗಾಟ ಸಾಕು — ಬೈಕ್ ಆಯತಪ್ಪಿ ಬಿದ್ದು ಹಿಂದಿನಿಂದ ಬರುವ ಬಸ್ ಅಥವಾ ಲಾರಿಯ ಚಕ್ರದ ಅಡಿಯಲ್ಲಿ ಸಾಯಬೇಕಾದ ಪರಿಸ್ಥಿತಿ. ಇತ್ತೀಚೆಗೆ ಕೂಳೂರಿನಲ್ಲಿ ಮಾಧವಿ ಎಂಬ ಮಹಿಳೆ ಇದೇ ರೀತಿಯ ಗುಂಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡರು. ಆದರೆ ಅಧಿಕಾರಿಗಳು ಇನ್ನೂ ಗಾಢ ಮೌನದಲ್ಲಿದ್ದಾರೆ.

ಇಲ್ಲಿ ರಸ್ತೆ ಸರಿಯಾಗಬೇಕಾದರೆ ಎಷ್ಟು ಮಂದಿ ಪ್ರಾಣ ಕೊಡಬೇಕು? ಗುಂಡಿ ಮುಚ್ಚಲು ಶವಪೆಟ್ಟಿಗೆಯ ಎಣಿಕೆ ಬೇಕೇ? ನಗರದ ಹೆಸರಿನಲ್ಲಿ “ಸ್ಮಾರ್ಟ್ ಸಿಟಿ” ಎಂಬ ಶಬ್ದ  ಹೊಳೆಯುತ್ತಿದ್ದರೂ, ನೆಲದ ಸತ್ಯ ಬೇರೆ ಕಥೆ ಹೇಳುತ್ತಿದೆ.

ಕಂಕನಾಡಿ–ಪಂಪ್‌ವೆಲ್ ಮಾರ್ಗ ಮಾತ್ರವಲ್ಲ, ನಗರದ ಅನೇಕ ಪ್ರಮುಖ ರಸ್ತೆಗಳು ಕುಸಿತದ ಹಾದಿಯಲ್ಲಿವೆ. ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಕೋಟಿ ಕೋಟಿ ರೂ. ರಸ್ತೆ ನಿರ್ವಹಣೆಗಾಗಿ ಮೀಸಲಾಗಿದೆ. ಆದರೆ ಕೆಲಸದ ಪತ್ತೆ ಇಲ್ಲ. ಕಾಗದದಲ್ಲಿ ಯೋಜನೆಗಳು, ನೆಲದಲ್ಲಿ ಗುಂಡಿಗಳು — ಇಂತಿದೆ ಸ್ಮಾರ್ಟ್ ಸಿಟಿಯ ಸತ್ಯ ಚಿತ್ರ.

ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ರಸ್ತೆ ಸರಿಪಡಿಸಲು ಅಧಿಕಾರಿಗಳಿಗೆ ಕರೆ, ಪತ್ರ, ವಿನಂತಿ ಎಲ್ಲವೂ ವ್ಯರ್ಥ! ಜನರ ಜೀವ ಹೋದ ಬಳಿಕ ಮಾತ್ರ ಸ್ಪೀಡ್ ಬ್ರೇಕರ್‌ ಹಾಕಿ, ಗುಂಡಿ ಮುಚ್ಚುವ ನಾಟಕ ನಡೆಯುತ್ತದೆ!” ಎಂದಿದ್ದಾರೆ. ಹಾಗಾಗಿ ತಕ್ಷಣ ರಸ್ತೆ ದುರಸ್ತಿ ಮಾಡಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಿ. ಜನರ ಜೀವ ಹೋದರೂ ಗುಂಡಿ ಹಾಗೇ ಉಳಿಯಬಾರದು.

 

 

 

 

error: Content is protected !!