ದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅಚ್ಚರಿಯ ಘಟನೆ ನಡೆದಿದೆ. ಹಿರಿಯ ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಕಡೆ ಶೂ ಎಸೆಯಲು ಯತ್ನಿಸಿದ್ದು, ಸಮಯೋಚಿತ ಕ್ರಮದಿಂದ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ.

ಘಟನೆ ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ನಡೆದಿದೆ. ವಿಚಾರಣೆಯ ಸಮಯದಲ್ಲಿ ಸಿಜೆಐ ಗವಾಯಿ ಅವರು ನೀಡಿದ ಅಭಿಪ್ರಾಯಕ್ಕೆ ಆಕ್ರೋಶಗೊಂಡ 71 ವರ್ಷದ ಕಿಶೋರ್ ರಾಕೇಶ್ ಎಂಬ ಹಿರಿಯ ವಕೀಲರು “ಸನಾತನ ಧರ್ಮಕ್ಕೆ ಅವಮಾನವನ್ನು ನಾನು ಸಹಿಸುವುದಿಲ್ಲ!” ಕೋರ್ಟ್ ಹಾಲ್‌ನಲ್ಲಿ ಶೂ ತೆಗೆಯಲು ಮುಂದಾದರು.
ಅಷ್ಟರಲ್ಲೇ ಅಲರ್ಟ್ ಆಗಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ರಾಕೇಶ್ ಅವರನ್ನು ತಡೆದು ಹೊರಗೆ ಕರೆದುಕೊಂಡು ಹೋದರು. ಈ ವೇಳೆ ಅವರು — *“ಸನಾತನ ಧರ್ಮಕ್ಕೆ ಅವಮಾನವನ್ನು ನಾನು ಸಹಿಸುವುದಿಲ್ಲ!”* ಎಂದು ಕೂಗಿಕೊಂಡು ಹೋದರು ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಸಿಜೆಐ ಗವಾಯಿ ಯಾವುದೇ ಮುಜುಗರ ತೋರದೆ, “ಈ ಘಟನೆಗಳಿಂದ ಯಾರೂ ವಿಚಲಿತರಾಗಬೇಡಿ. ನನಗೂ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಹೇಳಿ ವಿಚಾರಣೆಯನ್ನು ಮುಂದುವರಿಸಿದರು.
ದೆಹಲಿ ಡಿಸಿಪಿ ಹಾಗೂ ಸುಪ್ರೀಂ ಕೋರ್ಟ್ ಭದ್ರತಾ ಅಧಿಕಾರಿಗಳು ಕಿಶೋರ್ ರಾಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನದು ಖಜುರಾಹೊ ದೇವಾಲಯದ ವಿಗ್ರಹ ವಿವಾದ?

ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಖಜುರಾಹೊ ದೇವಾಲಯ ಸಂಕೀರ್ಣದ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್‌ನಿರ್ಮಿಸಲು ಹಾಗೂ ಮರುಸ್ಥಾಪಿಸಲು ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಸಿಜೆಐ ಗವಾಯಿ ನೇತೃತ್ವದ ಪೀಠವು ಸೆಪ್ಟೆಂಬರ್ 16ರಂದು ಅರ್ಜಿಯನ್ನು ವಜಾಗೊಳಿಸಿತ್ತು, ಏಕೆಂದರೆ ಈ ವಿಷಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವ್ಯಾಪ್ತಿಗೆ ಬರುವುದಾಗಿ ಸ್ಪಷ್ಟಪಡಿಸಿತ್ತು.
ಅರ್ಜಿ ತಿರಸ್ಕರಿಸುವ ವೇಳೆ ಸಿಜೆಐ ಗವಾಯಿ, “ಈ ಅರ್ಜಿ ಪ್ರಚಾರ ಹಿತಾಸಕ್ತಿಗಾಗಿ ಸಲ್ಲಿಸಲಾಗಿದೆ. ದೇವರ ಕೆಲಸ ದೇವರೇ ಮಾಡಲಿ, ನೀವು ವಿಷ್ಣುವಿನ ಕಟ್ಟಾ ಭಕ್ತರೆಂದರೆ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಧ್ಯಾನ ಮಾಡಿ.ʼ ಎಂದಿದ್ದರು. ಆಗ ಅರ್ಜಿದಾರ ರಾಕೇಶ್ ದಲಾಲ್ ತಮ್ಮ ಅರ್ಜಿಯಲ್ಲಿ, “ಮೊಘಲ್ ಆಕ್ರಮಣದ ಸಮಯದಲ್ಲಿ ವಿಷ್ಣುವಿನ ವಿಗ್ರಹ ವಿರೂಪಗೊಂಡಿದ್ದು, ಸರ್ಕಾರಕ್ಕೆ ಪದೇಪದೇ ಮನವಿ ಮಾಡಿದರೂ ಅದೇ ಸ್ಥಿತಿಯಲ್ಲಿದೆ,” ಎಂದು ಉಲ್ಲೇಖಿಸಿದ್ದರು.
ಈ ಘಟನೆಯಿಂದ ಕೋರ್ಟ್‌ನಲ್ಲಿ ಕ್ಷಣಿಕ ಗಲಾಟೆ ಉಂಟಾದರೂ, ನಂತರ ವಿಚಾರಣೆಗಳು ಸಾಮಾನ್ಯವಾಗಿ ಮುಂದುವರಿದವು.
