ಮಂಗಳೂರು: ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರು ಸೋಮವಾರ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿನ ಅಭಿವೃದ್ಧಿಗೆ ಮೈಲುಗಲ್ಲು ಹಾಕಿದೆ. ಇದೇ ರೀತಿ ತಲಪಾಡಿಯಿಂದ ಕಾರವಾರದವರೆಗಿನ 350 ಕಿ.ಮೀ. ವ್ಯಾಪಿಯ ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ತನಗೆ ನೀಡಿರುವ ಜವಾಬ್ಧಾರಿಯನ್ನು ನಿಭಾಯಿಸುವುದಾಗಿ ಹೇಳಿದರು.
ರಾಜ್ಯ ಸರಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವೃದ್ಧಿ ಮಂಡಳಿಯಾಗಿ ಶಾಸನ ಮಾಡಿ ಅಧಿಕಾರ ನೀಡಿದೆ. ಇದೀಗ ಅಗತ್ಯ ನೀತಿ ನಿಯಮಗಳ ಜಾರಿಯೊಂದಿಗೆ ಮಂಡಳಿ ಕಾರ್ಯ ನಿರ್ವಹಿಸಲಿದೆ. ಕರಾವಳಿ ಜಿಲ್ಲೆಗಳ ಹಿಂದಿನ ಎಲ್ಲಾ ಉಸ್ತುವಾರಿ ಸಚಿವರ ಜತೆಗೆ ಹಾಲಿ ಸಚಿವರ ಮಾರ್ಗದರ್ಶನ, ಸಲಹೆಯೊಂದಿಗೆ ಮಾಸ್ಟರ್ ಪ್ಲಾನ್ ರೂಪಿಸಿಕೊಂಡು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವುದಾಗಿ ಎಂ.ಎ. ಗಫೂರ್ ಭರವಸೆ ನೀಡಿದರು.