ನವದೆಹಲಿ: ವಿಶ್ವಸಂಸ್ಥೆಯ ವೇದಿಕೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನೀಡಿದ ಹೇಳಿಕೆಯ ಒಂದು ದಿನದೊಳಗೆ ಭಾರತ ಕಠಿಣ ಪ್ರತಿಕ್ರಿಯೆ ನೀಡಿದೆ. ಅಲ್ಲದೆ ಭಾರತ- ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದಾಗಿ ಹೇಳಿ ಅಮೆರಿಕಾ ಅಧ್ಯಕ್ಷ ನೋಬೈಲ್ ಪ್ರಶಸ್ತಿಯ ಬೆನ್ನು ಬಿದ್ದಿದ್ದಾರೆ ಎಂದು ಭಾರತ ವ್ಯಂಗ್ಯವಾಡಿದೆ.
ವಿಶ್ವಸಂಸ್ಥೆಯಲ್ಲಿ ಪ್ರತಿಕ್ರಿಯಿಸುವ ಹಕ್ಕನ್ನು ಬಳಸಿಕೊಂಡ ಭಾರತದ ಶಾಶ್ವತ ಕಾರ್ಯಾಚರಣೆಯ ಮೊದಲ ಕಾರ್ಯದರ್ಶಿ ಪೆಟಲ್ ಗಹ್ಲೋಟ್, “ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ. ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಪಡೆಗಳಿಂದ ಬಹಾವಲ್ಪುರ್ ಮತ್ತು ಮುರಿಡ್ಕೆ ಭಯೋತ್ಪಾದಕ ಶಿಬಿರಗಳಲ್ಲಿ ಹತರಾದ ಉಗ್ರರ ಅನೇಕ ಚಿತ್ರಗಳು ವಿಶ್ವದ ಮುಂದೆ ಇವೆ. ಪಾಕಿಸ್ತಾನದ ಹಿರಿಯ ಸೈನಿಕ ಮತ್ತು ರಾಜಕೀಯ ನಾಯಕರು ಕುಖ್ಯಾತ ಉಗ್ರರಿಗೆ ಸಾರ್ವಜನಿಕವಾಗಿ ಗೌರವ ಸಲ್ಲಿಸುವಾಗ, ಈ ಆಡಳಿತದ ನಿಲುವುಗಳ ಬಗ್ಗೆ ಯಾವುದೇ ಸಂದೇಹವಿರಬಹುದೇ?” ಎಂದು ಪ್ರಶ್ನಿಸಿದರು.
ಅವರು ಮುಂದುವರೆದು, “ಪ್ರಧಾನಿ ಹೇಳಿದಂತೆ ಸುಟ್ಟುಹೋದ ಹ್ಯಾಂಗರ್‌ಗಳು, ನಾಶವಾದ ರನ್‌ವೇಗಳು ನಮ್ಮ ವಿಜಯದ ಸಂಕೇತಗಳಾಗಿದ್ದು, ಅದನ್ನು ಆನಂದದಿಂದ ಸ್ವಾಗತಿಸುತ್ತೇವೆ” ಎಂದು ವ್ಯಂಗ್ಯವಾಡಿದರು.
ಶುಕ್ರವಾರ ಷರೀಫ್, ಭಾರತ ಜೊತೆ ಸಂವಾದಕ್ಕೆ ಪಾಕಿಸ್ತಾನ ಸಿದ್ಧವಿದೆ ಎಂದು ಹೇಳಿದ್ದರೂ, ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಯುದ್ಧವಿಮಾನಗಳನ್ನು ಹೊಡೆದುರುಳಿಸಿ “ಕಸ ಮತ್ತು ಧೂಳು”ಆಗಿ ಮಾರ್ಪಡಿಸಿದೆ ಎಂದು ಬೋಂಗು ಬಿಟ್ಟಿದ್ದರು. ಪಹಲ್ಗಾಮ್ ದಾಳಿಯ ನಂತರ ಭಾರತ ರಾಜಕೀಯ ಲಾಭಕ್ಕಾಗಿ ಪ್ರತಿಕ್ರಿಯಿಸಿದೆ ಎಂಬ ಆರೋಪವನ್ನೂ ಅವರು ಮಾಡಿದ್ದರು.
ಈ ಹೇಳಿಕೆಯನ್ನು “ವಿಲಕ್ಷಣ”ವೆಂದು ಭಾರತ ತಿರಸ್ಕರಿಸಿದೆ. “ಮೇ 9ರವರೆಗೆ ಪಾಕಿಸ್ತಾನ ಭಾರತದ ಮೇಲೆ ದಾಳಿಯ ಬೆದರಿಕೆ ಹಾಕುತ್ತಿತ್ತು. ಆದರೆ ಮೇ 10ರಂದು ಅವರ ಸೇನೆಯೇ ಹೋರಾಟ ನಿಲ್ಲಿಸುವಂತೆ ನಮ್ಮ ಬಳಿ ಮನವಿ ಮಾಡಿತು” ಎಂದು ಗಹ್ಲೋಟ್ ನೆನಪಿಸಿದರು.
ಷರೀಫ್ ತಮ್ಮ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶಾಂತಿಯ ವ್ಯಕ್ತಿ ಎಂದು ಹೊಗಳಿ, ಕದನ ವಿರಾಮಕ್ಕೆ ಕಾರಣರಾದಂತೆ ಶ್ಲಾಘಿಸಿದರು. ಅಲ್ಲದೆ, ಪಾಕಿಸ್ತಾನವು ಅವರನ್ನು ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದನ್ನು ಉಲ್ಲೇಖಿಸಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ, ಮೇ 7ರಂದು ಭಾರತ ಪಾಕಿಸ್ತಾನದ ಭಯೋತ್ಪಾದಕ ತಾಣಗಳ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿತ್ತು.