ದುಬೈ: ಏಷ್ಯಾ ಕಪ್ 2025 ಸೂಪರ್ 4ರ ಪಂದ್ಯದಲ್ಲಿ ಶುಕ್ರವಾರ ಭಾರತ ಮತ್ತು ಶ್ರೀಲಂಕಾ ನಡುವೆ ತೀವ್ರ ಹಣಾಹಣಿ ನಡೆಯಿತು. ಆದರೆ ಪಂದ್ಯವನ್ನೂ ಮೀರಿ ಹೃದಯಸ್ಪರ್ಶಿ ಕ್ಷಣವೊಂದು ಮೈದಾನದಲ್ಲಿ ಎಲ್ಲರ ಮನ ಗೆದ್ದಿತು.
22 ವರ್ಷದ ಶ್ರೀಲಂಕಾದ ಸ್ಪಿನ್ನರ್ ಡುನಿತ್ ವೆಲ್ಲಾಲಗೆ, ಈ ತಿಂಗಳ ಆರಂಭದಲ್ಲಿ ತಂದೆ ಸುರಂಗ ವೆಲ್ಲಾಲಗೆ ಅವರನ್ನು ಕಳೆದುಕೊಂಡ ದುಃಖದಿಂದ ಬಳಲುತ್ತಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ನಂತರ ಶ್ರೀಲಂಕಾದ ಕೋಚ್ ಸನತ್ ಜಯಸೂರ್ಯ ಅವರು ಈ ದುಃಖದ ಸುದ್ದಿಯನ್ನು ಡುನಿತ್‌ಗೆ ತಿಳಿಸಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ವೆಲ್ಲಾಲಗೆ ಅವರನ್ನು ಸಮೀಪಿಸಿ, ಎದೆಯ ಮೇಲೆ ಸಾಂತ್ವನದ ಕೈಯಿಟ್ಟು ಧೈರ್ಯ ತುಂಬಿದರು. ಇಬ್ಬರೂ ಕೆಲವು ಕ್ಷಣಗಳ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಸೂರ್ಯಕುಮಾರ್ ಪದೇಪದೇ ಅವರ ಬೆನ್ನ ತಟ್ಟಿ ಧೈರ್ಯ ತುಂಬಿದರೆ, ವೆಲ್ಲಾಲಗೆ ಕೃತಜ್ಞತೆಯಿಂದ ಪ್ರತಿಕ್ರಿಯಿಸಿದರು. ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಕೋಚ್ ಮೈಕ್ ಹೆಸ್ಸನ್ ಮತ್ತು ಮ್ಯಾನೇಜರ್ ನವೀದ್ ಅಕ್ರಮ್ ಕೂಡ ವೆಲ್ಲಾಲಗೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಪಂದ್ಯದ ದೃಷ್ಟಿಯಿಂದ, ಭಾರತ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 202 ರನ್ ಗಳಿಸಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 61 ರನ್‌ಗಳೊಂದಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ಶ್ರೀಲಂಕಾದ ಪರ ಪಾತುಮ್ ನಿಸ್ಸಂಕಾ ಶತಕ ಬಾರಿಸಿ ತಂಡವನ್ನು ಗೆಲುವಿನ ದಡದತ್ತ ತಳ್ಳಿದರು. ಅಂತಿಮ ಓವರ್‌ನಲ್ಲಿ ನಿಸ್ಸಂಕಾ ಔಟಾದ ಕಾರಣ ಪಂದ್ಯ ಸೂಪರ್ ಓವರ್‌ಗೆ ಹೋಗಿತು. ಅರ್ಷದೀಪ್ ಸಿಂಗ್ ಕೇವಲ ಎರಡು ರನ್‌ಗಳನ್ನು ಬಿಟ್ಟುಕೊಟ್ಟು ಅಬ್ಬರಿಸಿದರು. ನಂತರ ಸೂರ್ಯಕುಮಾರ್ ವನಿಂದು ಹಸರಂಗ ಎಸೆದ ಮೊದಲ ಎಸೆತದಲ್ಲೇ ಅಗತ್ಯವಿದ್ದ ರನ್‌ಗಳನ್ನು ಗಳಿಸಿ ಭಾರತಕ್ಕೆ ರೋಮಾಂಚಕ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ, ಭಾರತ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಿದೆ. ಇದೀಗ ಸೆಪ್ಟೆಂಬರ್ 28ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.