ರಾಮನಗರ: ಬಿಡದಿ ರೈಲು ನಿಲ್ದಾಣದಲ್ಲೇ ನಿಲುಗಡೆ ಮಾಡಿದ ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ನಡುವಿನ ಮೆಮು ರೈಲು ಒಂದು ಗಂಟೆಗೂ ಹೆಚ್ಚುಕಾಲ ಕಳೆದರೂ ಪ್ರಯಾಣ ಆರಂಭಿಸದ್ದರಿಂದ ಪ್ರಯಾಣಿಕರು ರೈಲ್ವೆ ಹಳಿಗಳ ಮೇಲೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ(ಫೆ.01) ಸಂಜೆ ನಡೆದಿದೆ.

ಎಂದಿನಂತೆ ಭಾನುವಾರ ಸಂಜೆ 1.40ಕ್ಕೆ ಮೈಸೂರಿನ ಅಶೋಕಪುರಂನಿಂದ ಹೊರಡುವ ಮೆಮು ರೈಲು ಸಂಜೆ 5.05 ಗಂಟೆಗೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣ ತಲುಪಬೇಕಿತ್ತು. ಅದರೆ, ಕೆಲ ನಿಮಿಷ ತಡವಾಗಿ ಹೊರಟ ಈ ರೈಲು ಮೈಸೂರು ನಿಲ್ದಾಣಕ್ಕೆ 30 ನಿಮಿಷ ತಡವಾಗಿ ಬಂದಿತ್ತು. ಬಳಿಕ ಮಾರ್ಗಮಧ್ಯೆ ಸಿಗುವ ಎಲ್ಲ ರೈಲು ನಿಲ್ದಾಣಗಳಿಗೆ 30 ರಿಂದ 35 ನಿಮಿಷ ತಡವಾಗಿ ತಲುಪಿದ ರೈಲು, ಬಿಡದಿ ರೈಲು ನಿಲ್ದಾಣಕ್ಕೆ 4.08 ಗಂಟೆಗೆ ಬರಬೇಕಾಗಿದ್ದ ರೈಲು 5.35 ನಿಮಿಷಕ್ಕೆ ಬಂದು ತಲುಪಿತು.

1 ನಿಮಿಷ ಮಾತ್ರ ನಿಲುಗಡೆ ಮಾಡಬೇಕಿತ್ತು. ಆದರೆ, 30 ನಿಮಿಷ ಕಳೆದರೂ ರೈಲು ಹೊರಡಲಿಲ್ಲ. ಸ್ಟೇಷನ್ ಮಾಸ್ಟರ್ ಕೊಠಡಿಗೆ ಬೀಗ ಬೀಗಹಾಕಿದ್ದರಿಂದ ಪ್ರಯಾಣಿಕರು ರೈಲಿನ ಮುಂಭಾಗದ ಕಂಬಿಗಳ ಮೇಲೆ ನಿಂತು 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು. ಎಚ್ಚೆತ್ತ ರೈಲ್ವೆ ಇಲಾಖೆ, ಕೊನೆಗೂ ರೈಲು ಹೊರಡಲು ಅವಕಾಶ ಮಾಡಿಕೊಟ್ಟಿತು. ಕೊನೆಗೆ ಸಂಜೆ 6.46 ನಿಮಿಷಕ್ಕೆ ಬಿಡದಿ ರೈಲು ನಿಲ್ದಾಣದಿಂದ ಹೊರಟು 7.45ಕ್ಕೆ ಬೆಂಗಳೂರು ತಲುಪಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.