ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್: ಮಗಳ ಬರ್ತ್‌ಡೇ ಸಂಭ್ರಮಕ್ಕೆ ಯುದ್ಧದ ಕಂಟಕ!

ಬೆಂಗಳೂರು/ಅಬುಧಾಬಿ: ಮಗಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ದುಬೈಗೆ ತೆರಳಿದ್ದ ಬೆಂಗಳೂರಿನ ಕಿರಣ್ ಮತ್ತು ಸುನೀತಾ ದಂಪತಿ, ಈಗ ಇರಾನ್-ಇಸ್ರೇಲ್ ಯುದ್ಧದ ಮಧ್ಯೆ ಸಿಲುಕಿ ಅಬುಧಾಬಿಯಲ್ಲಿ ಅತಂತ್ರರಾಗಿದ್ದಾರೆ. ಫೆಬ್ರವರಿ 23ರಂದು ಸಂಭ್ರಮದಿಂದ ಪ್ರವಾಸ ಆರಂಭಿಸಿದ್ದ ಈ ಕುಟುಂಬ, ಈಗ ಪ್ರಾಣಭಯದಲ್ಲಿ ಕಾಲ ಕಳೆಯುವಂತಾಗಿದೆ.

ಘಟನೆಯ ವಿವರ: ಕಿರಣ್ ಮತ್ತು ಸುನೀತಾ ದಂಪತಿ ತಮ್ಮ ಮಗಳ ಬರ್ತ್‌ಡೇಯನ್ನು ಸ್ಮರಣೀಯವಾಗಿಸಲು ದುಬೈಗೆ ಹೋಗಿದ್ದರು. ಬುರ್ಜ್ ಖಲೀಫಾದ ಮುಂದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದರು. ಶನಿವಾರ (ಫೆಬ್ರವರಿ 28) ಅವರ ವಾಪಸಾತಿ ಪ್ರಯಾಣ ನಿಗದಿಯಾಗಿತ್ತು. ಅದರಂತೆ ಅವರು ಅಬುಧಾಬಿ ಏರ್‌ಪೋರ್ಟ್‌ಗೆ ಆಗಮಿಸಿ, ಇಮಿಗ್ರೇಷನ್ ಪ್ರಕ್ರಿಯೆಯನ್ನೂ ಮುಗಿಸಿದ್ದರು. ಇನ್ನೇನು ವಿಮಾನ ಏರಬೇಕು ಎನ್ನುವಷ್ಟರಲ್ಲಿ ಕ್ಷಿಪಣಿ ದಾಳಿಗಳು ಆರಂಭವಾಗಿ, ವಿಮಾನಯಾನ ಸ್ಥಗಿತಗೊಂಡಿತು.

ಸುನೀತಾ ಅವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ನಮಗೆ ತುಂಬಾ ಭಯವಾಗುತ್ತಿದೆ. ಶನಿವಾರ ಇಡೀ ದಿನ ಏರ್‌ಪೋರ್ಟ್‌ನಲ್ಲೇ ಕಳೆದವು. ನಂತರ ಅಧಿಕಾರಿಗಳು ನಮ್ಮನ್ನು ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ. ಆದರೆ ಸುತ್ತಮುತ್ತ ಕೇಳಿಸುತ್ತಿರುವ ಸ್ಫೋಟದ ಸದ್ದುಗಳು ಆತಂಕ ಹೆಚ್ಚಿಸುತ್ತಿವೆ. ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ದಯವಿಟ್ಟು ನಮ್ಮನ್ನು ಆದಷ್ಟು ಬೇಗ ಸುರಕ್ಷಿತವಾಗಿ ರಾಜ್ಯಕ್ಕೆ ಕರೆಸಿಕೊಳ್ಳಿ” ಎಂದು ಅವರು ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.

ಸದ್ಯ ಈ ದಂಪತಿ ಅಬುಧಾಬಿಯ ಹೋಟೆಲ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಯುದ್ಧದ ತೀವ್ರತೆಯಿಂದಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ. ದಂಪತಿಯ ಕುಟುಂಬಸ್ಥರು ಬೆಂಗಳೂರಿನಲ್ಲಿ ಆತಂಕದಿಂದ ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿದ್ದಾರೆ.

error: Content is protected !!