ವಾಷಿಂಗ್ಟನ್: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಹೊರನೋಟಕ್ಕೆ ಶಾಂತಿಯ ಮಂತ್ರ ಜಪಿಸುತ್ತಾ, “ನಮ್ಮ ಮಣ್ಣನ್ನು ಇರಾನ್ ವಿರುದ್ಧ ಬಳಸಲು ಬಿಡುವುದಿಲ್ಲ” ಅಂದಿದ್ದರು. ಆದರೆ ವಾಷಿಂಗ್ಟನ್ ಪೋಸ್ಟ್ ಈಗ ಅಸಲಿ ಬಾಂಬ್ ಸಿಡಿಸಿದೆ! ಇದೇ ಸೌದಿ ಸುಲ್ತಾನ ಕಳೆದ ತಿಂಗಳು ಡೊನಾಲ್ಡ್ ಟ್ರಂಪ್‌ಗೆ ಗುಪ್ತವಾಗಿ ಫೋನ್ ಮಾಡಿ, “ಇರಾನ್ ಮೇಲೆ ದಾಳಿ ಮಾಡಿ” ಅಂತ ಒತ್ತಡ ಹೇರಿದ್ದರಂತೆ!

ದುಬೈ, ದೋಹಾ ಮೇಲೆ ಇರಾನ್‌ನ ಪ್ರತಿಕಾರ:
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ನ ಸುಪ್ರೀಂ ಲೀಡರ್ ಖಮೇನಿಯನ್ನು ಮುಗಿಸಿದ ಬೆನ್ನಲ್ಲೇ, ಇರಾನ್ ಸುಮ್ಮನೆ ಕೂರಲಿಲ್ಲ. ತನ್ನ “ಹಾವಿನ ತಲೆ” ಕತ್ತರಿಸಿದ ಸಿಟ್ಟಿಗೆ ಇಡೀ ಗಲ್ಫ್ ರಾಷ್ಟ್ರಗಳನ್ನೇ ಗುರಿ ಮಾಡಿದೆ. ದುಬೈನ ಐಷಾರಾಮಿ ಪಾಮ್ ಜುಮೇರಾ ದ್ವೀಪದಲ್ಲಿ ಕ್ಷಿಪಣಿಗಳು ಬಿದ್ದು ಬೆಂಕಿ ಉಗುಳುತ್ತಿವೆ. ಅಬುಧಾಬಿ, ದೋಹಾ, ರಿಯಾದ್—ಎಲ್ಲಾ ಕಡೆ ಈಗ ಸೈರನ್ ಸದ್ದು ಕೇಳಿಸುತ್ತಿದದೆ.

ಸೌದಿ ಯುವರಾಜನ ರೆಡಿ ಸಿಗ್ನಲ್:
ತಾನು ರಹಸ್ಯವಾಗಿ ದಾಳಿಗೆ ಪ್ರಚೋದನೆ ನೀಡಿದ್ದರೂ, ಈಗ ಇರಾನ್ ತನ್ನ ಮೇಲೆ ತಿರುಗಿ ಬಿದ್ದ ಕೂಡಲೇ ಸೌದಿ ಅರೇಬಿಯಾ “ಕೇಡಿ ಇರಾನ್” ಅಂತ ಕೂಗುತ್ತಿದೆ. ಅರಬ್ ಮಿತ್ರ ರಾಷ್ಟ್ರಗಳಾದ ಯುಎಇ, ಕತಾರ್, ಕುವೈತ್ ರಾಜರಿಗೆ ಫೋನ್ ಮಾಡಿರುವ ಸೌದಿ ಯುವರಾಜ, “ನಾವೆಲ್ಲಾ ಒಂದಾಗೋಣ, ಇರಾನ್‌ನ ಈ ಅಟ್ಟಹಾಸಕ್ಕೆ ತಕ್ಕ ಶಾಸ್ತಿ ಮಾಡೋಣ” ಎಂದು ಯುದ್ಧಕ್ಕೆ ರಣಕಹಳೆ ಊದುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಹಗಲು-ರಾತ್ರಿ ಬಾಂಬ್ ಮಳೆ:
ಅತ್ತ ಅಮೆರಿಕ ಅಧ್ಯಕ್ಷ ಟ್ರಂಪ್, “ಈ ವಾರ ಪೂರ್ತಿ ಇರಾನ್ ಮೇಲೆ ಬಾಂಬ್ ಮಳೆ ಮುಂದುವರಿಯಲಿದೆ ಎಂದು ಅಂತ ಎಚ್ಚರಿಸಿದ್ದಾರೆ. ಇತ್ತ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು, “ನಾವು ಹಳೆ ಸೇಡು ತೀರಿಸಿಕೊಳ್ಳುತ್ತೇವೆ, ಇಸ್ರೇಲ್ ಮತ್ತು ಅಮೆರಿಕದ ಅಡಗುದಾಣಗಳನ್ನ ಸ್ಮಶಾನ ಮಾಡುತ್ತೇವೆ” ಅಂತ ಕೆಂಡ ಉಗುಳುತ್ತಿದ್ದಾರೆ.
86 ವರ್ಷದ ಖಮೇನಿ ಹೋದ ಮೇಲೆ ಇರಾನ್ ಅನಾಥವಾಗಿದೆ ಅಂತ ಟ್ರಂಪ್ ಸಂಭ್ರಮಿಸುತ್ತಿರಬಹುದು. ಆದರೆ ಇರಾನ್‌ನ ಈ ಆತಂಕಕಾರಿ ಪ್ರತಿದಾಳಿ ಮಧ್ಯಪ್ರಾಚ್ಯವನ್ನ ಅಕ್ಷರಶಃ ನರಕವನ್ನಾಗಿ ಮಾಡಿದೆ. ಸಮುದ್ರದಲ್ಲಿ ಹಡಗುಗಳು ಮುಳುಗುತ್ತಿವೆ, ಆಕಾಶದಲ್ಲಿ ಮಿಸೈಲ್‌ಗಳು ಹಾರುತ್ತಿವೆ.
