ಮಂಗಳೂರು: ಉಳ್ಳಾಲ ತಾಲೂಕು ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯು ಆಯೋಜಿಸುವ 44ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಅಧ್ಯಕ್ಷ ಮೋಹನ್ ಶೆಟ್ಟಿ ಹೇಳಿದರು.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, 1982ರಲ್ಲಿ ಸ್ಥಾಪನೆಯಾದ ಸಮಿತಿಯು ಕಳೆದ 43 ವರ್ಷಗಳಿಂದ ನವರಾತ್ರಿ ಹಬ್ಬದ ಅಂಗವಾಗಿ ಶಾರದಾ ಮಹೋತ್ಸವವನ್ನು ಆಚರಿಸುತ್ತಿದ್ದು, ಇದೀಗ ಶ್ರೀ ಶಾರದಾ ಸೇವಾ ಟ್ರಸ್ಟ್ ಆಗಿ ನೋಂದಾಯಿಸಿಕೊಂಡು ನೂತನ ಶಾರದಾ ಮಂದಿರವನ್ನು ಲೋಕಾರ್ಪಣೆ ಮಾಡಿದೆ. ಸೆ. 29ರಂದು ಶ್ರೀ ಶಾರದಾ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಮಹೋತ್ಸವ ಪ್ರಾರಂಭವಾಗಲಿದ್ದು, ದಿನವೂ ಲಲಿತ ಸಹಸ್ರನಾಮ, ಭಜನೆ, ಮಹಾಪೂಜೆ, ರಂಗಪೂಜೆ, ಅಕ್ಷರಾಭ್ಯಾಸ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭಾಕಲಾಪವನ್ನು ಕರಾವಳಿ ಕಾಲೇಜುಗಳ ಸಂಸ್ಥಾಪಕಾಧ್ಯಕ್ಷ ಗಣೇಶ್ ಎಸ್. ರಾವ್ ಉದ್ಘಾಟಿಸಲಿದ್ದು, ರವೀಂದ್ರ ಶೇಟ್ (ಡೈಮಂಡ್ ಹೌಸ್, ಲೇಡಿಹಿಲ್) ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತೆ ಸಿಂಧೂರ ರಾಜ, ರಾಜ್ಯಮಟ್ಟದ ತೃತೀಯ ರ‍್ಯಾಂಕ್ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿ ಹಿಮಾಂಶು ಕೊಲ್ಯ ಇವರನ್ನು ಸನ್ಮಾನಿಸಲಾಗುವುದು. ಅದೇ ವೇಳೆ, ಎಸ್‌ಎಸ್‌ಎಲ್‌ಸಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಮಿತಿಯ ಸ್ಥಾಪಕ ಸದಸ್ಯರಾದ ರಾಮಚಂದ್ರ ಕುಂಪಲ, ಮಾಜಿ ಅಧ್ಯಕ್ಷ ಪ್ರಕಾಶ್ ಎಚ್, ಭಜಕರಾದ ರಮೇಶ್ ಎ. ಕೊಟ್ಟಾರಿ ಇವರಿಗೂ ಸನ್ಮಾನ ಸಲ್ಲಿಸಲಾಗುವುದು ಎಂದರು.
ಸಾಂಸ್ಕೃತಿಕ ವೈಭವ
ಸೆ. 29 ರಾತ್ರಿ ಶಾಸ್ತ್ರೀಯ, ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದೆ, ಅದೇ ರೀತಿ ಸೆ. 30 ಬೆಳಿಗ್ಗೆ 11ರಿಂದ “ಏಕಾದಶಿ ಮಹಾತ್ಮ” ಯಕ್ಷಗಾನ ತಾಳಮದ್ದಳೆ (ಡಾ. ದಿನಕರ್ ಪಚ್ಚನಾಡಿ), ಸೆ. 30 ರಾತ್ರಿ 9ಕ್ಕೆ “ಅಪ್ಪೆ ಮಂತ್ರದೇವತೆ” ತುಳು ನಾಟಕ (ಉಡುಪಿ ರವಿ ಕುಮಾರ್ ಕಡೆಕಾರ್ ನಿರ್ದೇಶನ) ನಡೆಯಲಿದ್ದು, ಅ. 1 ಸಂಜೆ ಮಂಗಳಪೂಜೆ ನಂತರ ಹುಲಿವೇಷ, ಸ್ತಬ್ಧಚಿತ್ರ ವೈಭವದ ಶೋಭಾಯಾತ್ರೆ ಸೋಮೇಶ್ವರ ಸಮುದ್ರ ತೀರದಲ್ಲಿ ಜಲಸ್ತಂಭನದೊಂದಿಗೆ ಸಂಪನ್ನಗೊಳ್ಳಲಿದೆ ಎಂದರು. ಅದೇ ರೀತಿ ನೂತನ ಶಾರದಾ ಮಂದಿರ ವರ್ಧಂತ್ಯುತ್ಸವದ ಅಂಗವಾಗಿ ಅ. 7ರಂದು ಭಜನಾ ಸ್ಪರ್ಧೆ ಹಾಗೂ ಸಂಜೆ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಳರ ಶಿಷ್ಯರ ನೃತ್ಯ ಮೋಹನ ಕಾರ್ಯಕ್ರಮ ಜರಗಲಿದೆ ಎಂದರು.
ಈ ಸಂದರ್ಭದಲ್ಲಿ ಉಮೇಶ್ ಕುಲಾಲ್, ರಾಜೇಶ್ ಕುಮಾರ್ ಕೆ.ಎಸ್., ಲಿಂಗಪ್ಪ ಪೂಜಾರಿ, ಗಣೇಶ್ ಉಪಸ್ಥಿತರಿದ್ದರು.