ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ಪಾನ್ ಮಸಾಲಾ ಮತ್ತು ತಂಬಾಕು ಪದಾರ್ಥಗಳನ್ನು ದಕ್ಷಿಣ ವಲಯದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಶೋಧ ನಡೆಸಿದ್ದು, ಈ ವೇಳೆ ಸೂಕ್ತ ದಾಖಲೆಗಳು ಹಾಗೂ ಬಿಲ್ಲುಗಳಿಲ್ಲದೆ ತಂಬಾಕು ಪದಾರ್ಥಗಳ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಕಾರ್ಯಾಚರಣೆಯಲ್ಲಿ ಕಮಲಾ ಪಸಂದ್ ಪಾನ್ ಮಸಾಲಾ, ಹನ್ಸ್ ಚಾಪ್, ಚೈನಿ ಫಿಲ್ಟರ್ ತಂಬಾಕು ಮತ್ತು ಶಿಖರ್ ಪಾನ್ ಮಸಾಲಾ ಎಂಬ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಪಾನ್ ಮಸಾಲಾ ಹಾಗೂ ತಂಬಾಕು ಪದಾರ್ಥಗಳನ್ನು ದೆಹಲಿಯಿಂದ ಬೆಂಗಳೂರಿಗೆ ರೈಲು ಮಾರ್ಗದ ಮೂಲಕ ಸಾಗಿಸಲಾಗುತ್ತಿತ್ತು. ಅವುಗಳನ್ನು ದಾಖಲೆಗಳಿಲ್ಲದೆ ನಿಲ್ದಾಣದ ಆವರಣದಲ್ಲಿರುವ ಕೆಲ ಸರಕು ವಾಹನಗಳು ಮತ್ತು ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿರುವ ಚೀಲಗಳಲ್ಲಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ ಎಂದು ಜಾರಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1 ಕೋಟಿ ರೂ.ಮೌಲ್ಯ: ಈ ಚೀಲಗಳ ಪರಿಶೀಲಿಸಿ ಸುಮಾರು 1 ಕೋಟಿ ರೂ. ಮೌಲ್ಯದ 850ಕ್ಕೂ ಅಧಿಕ ಚೀಲಗಳ ಪಾನ್ ಮಸಾಲಾ ಮತ್ತು ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕವಾಗಿ ಈ ವಸ್ತುಗಳ ಸಾಗಾಟಗಾರರು ಜಿಎಸ್‌ಟಿ ನಿಯಮಾವಳಿ ಅನ್ವಯ ಖರೀದಿ ಮಾಡದೆ ಅಕ್ರಮವಾಗಿ ಸಾಗಾಟ ಮಾಡಿರುವುದು ಗೊತ್ತಾಗಿದೆ. ಅದರಿಂದ ಸರ್ಕಾರದ ಬೊಕ್ಕಸಕ್ಕೆ ಗಣನೀಯ ಪ್ರಮಾಣದ ರಾಜಸ್ವ ನಷ್ಟವಾಗಿರುವುದು ಕಂಡು ಬಂದಿದೆ. ಸೂಕ್ತ ದಾಖಲೆಗಳಿಲ್ಲದೆ ಹಾಗೂ ತೆರಿಗೆ ಬಿಲ್ಲುಗಳಿಲ್ಲದೆ ಸರಕುಗಳನ್ನು ಸಾಗಿಸುವ ಇಂತಹ ಅನಧಿಕೃತ ಚಟುವಟಿಕೆಗಳ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಜತೆಗೆ ಜಿಎಸ್‌ಟಿ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ (ಜಾರಿ ವಿಭಾಗ) ಅಪರ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.