ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಮಹತ್ವದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ.) ಪದವಿಯನ್ನು ಪ್ರದಾನ ಮಾಡಲಾಗಿದೆ.

ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಜಯವಂತ ನಾಯಕ್ ಅವರ ಮಾರ್ಗದರ್ಶನದಲ್ಲಿ “ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ – ಒಂದು ಪ್ರಕರಣ ಅಧ್ಯಯನ” ಎಂಬ ವಿಷಯದ ಮೇಲೆ ಸಂಶೋಧನಾ ಪ್ರೌಢ ಪ್ರಬಂಧವನ್ನು ಸಲ್ಲಿಸಿದ್ದರು.

ವಿಶೇಷವಾಗಿ ಅತೀ ಅಸುರಕ್ಷಿತ ಜನಾಂಗ (PVTG) ಆಗಿರುವ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮಗಳ ವ್ಯಾಪ್ತಿ, ಸವಾಲುಗಳು ಹಾಗೂ ಪರಿಣಾಮಗಳನ್ನು ಈ ಅಧ್ಯಯನವು ವಿಶ್ಲೇಷಿಸಿದ್ದು, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ರೂಪಿಸಲು ಈ ಸಂಶೋಧನೆಯು ಮಹತ್ವದ ಕೊಡುಗೆ ನೀಡಲಿದೆ ಎಂದು ಶೈಕ್ಷಣಿಕ ವಲಯದಲ್ಲಿ ಶ್ಲಾಘಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ನಡೆದ ಮೌಖಿಕ ಪರೀಕ್ಷೆಯನ್ನು ಕುವೆಂಪು ವಿಶ್ವವಿದ್ಯಾಲಯದ ಡಾ. ಎಸ್.ಎನ್. ಯೋಗೀಶ್ ಹಾಗೂ ತಮಿಳುನಾಡಿನ ಗಾಂಧಿಗ್ರಾಮ ರೂರಲ್ ಇನ್ಸ್ಟಿಟ್ಯೂಟ್‌ನ ಡಾ. ರಾಜೇಂದ್ರನ್ ಅವರು ಮೌಲ್ಯಮಾಪನ ಮಾಡಿದ್ದರು. ಯಶಸ್ವಿ ಮೌಖಿಕ ಪರೀಕ್ಷೆಯ ನಂತರ, ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಜಗದೀಶ್ ಟಿ. ಅವರ ಉಪಸ್ಥಿತಿಯಲ್ಲಿ ಪದವಿ ಪ್ರದಾನವನ್ನು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ವಿವಿಯ ಗಣ್ಯ ಪ್ರಾಧ್ಯಾಪಕರಾದ ಡಾ. ಮುನಿರಾಜು ವೈ, ಡಾ. ರಾಮಕೃಷ್ಣ ಬಿ.ಎಂ., ಡಾ. ಸುಭಾಷಿಣಿ ಶ್ರೀವತ್ಸ, ಡಾ. ಜಗದೀಶ್, ಡಾ. ಮಾಧವ, ಉಪನ್ಯಾಸಕ ರಾಜೇಶ್ ಕುಮಾರ್ ಸೇರಿದಂತೆ ಅನೇಕ ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೆಂಕಟೇಶ ನಾಯಕ್ ಅವರು ಶ್ರೀ ಗೋಪಾಲಕೃಷ್ಣ ನಾಯಕ್ ಮತ್ತು ದಿವಂಗತ ಶ್ರೀಮತಿ ಜ್ಯೋತಿ ನಾಯಕ್ ದಂಪತಿಗಳ ಪುತ್ರರಾಗಿದ್ದಾರೆ. ಪದವಿ ಪ್ರದಾನದ ವೇಳೆ ಅವರ ಪತ್ನಿ ಕಾವ್ಯ ಪಿ. ಹೆಗ್ಡೆ (ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ) ಅವರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.