
ಮೈಸೂರು: ಮೈಸೂರು ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿ ಭಾನುವಾರ(ಫೆ.8) ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ನಾಲ್ಕಕ್ಕೂ ಅಧಿಕ ಗೋದಾಮುಗಳು ಹೊತ್ತಿ ಉರಿದಿದೆ.

ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದಲ್ಲಿರುವ ಈ ಗೋದಾಮುಗಳಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ವ್ಯಾಪಿಸಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಅದೃಷ್ಟವಶಾತ್, ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಹಳೆಯ ವಸ್ತುಗಳು ಮತ್ತು ಸುಲಭವಾಗಿ ಹೊತ್ತಿ ಉರಿಯುವ ಸಾಮಗ್ರಿಗಳು ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿತು ಎಂದು ತಿಳಿದುಬಂದಿದೆ. ಬೆಂಕಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿದ್ದು, ಕುಡಿದ ಮತ್ತಿನಲ್ಲಿ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯು ಮೈಸೂರಿನ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.