ಕಟೀಲು: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರವಾದ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ವತಿಯಿಂದ ‘ಇ-ಹುಂಡಿ’ (E-Hundi) ಸೌಲಭ್ಯವನ್ನು ಫೆಬ್ರವರಿ 6ರಂದು ಅಳವಡಿಸಲಾಯಿತು.

ಕೆನರಾ ಬ್ಯಾಂಕ್ ಮಂಗಳೂರು ವಲಯ ಮುಖ್ಯಸ್ಥರಾದ ಮಂಜುನಾಥ್ ಬಿ. ಸಿಂಗೈ ಅವರ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇವಳದ ಆನುವಂಶಿಕ ಮೊಕ್ತೇಸರರಾದ ಸನತ್ ಕುಮಾರ್ ಶೆಟ್ಟಿ ಮತ್ತು ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರು ಜಂಟಿಯಾಗಿ ಇ-ಹುಂಡಿಯನ್ನು ಉದ್ಘಾಟಿಸಿದರು.

ಈ ಅತ್ಯಾಧುನಿಕ ಇ-ಹುಂಡಿ ಸೌಲಭ್ಯವು ಭಕ್ತರಿಗೆ ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಕಾಣಿಕೆಯನ್ನು ಸಲ್ಲಿಸಲು ಸಹಕಾರಿಯಾಗಲಿದೆ. ಕೆನರಾ ಬ್ಯಾಂಕ್ ಈ ಭಾಗದ ಪ್ರಮುಖ ದೇವಾಲಯ ಹಾಗೂ ಸಂಸ್ಥೆಗಳಲ್ಲಿ ಅಳವಡಿಸಿರುವ ಆರನೇ ಇ-ಹುಂಡಿ ಇದಾಗಿದೆ ಎಂಬುದು ಗಮನಾರ್ಹ.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪ ಮಹಾಪ್ರಬಂಧಕರುಗಳಾದ ಲತಾ ಕುರುಪ್ ಮತ್ತು ಎಲ್. ಆರ್. ವಿಜಯಶ್ರೀ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಪೂರಕವಾಗಿ ಧಾರ್ಮಿಕ ಕೇಂದ್ರಗಳಲ್ಲಿಯೂ ಇಂತಹ ಸೌಲಭ್ಯಗಳು ಲಭ್ಯವಾಗುತ್ತಿರುವುದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.