ಮಂಗಳೂರು: ಹಿಂದುಳಿದ ಆಯೋಗದ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅರ್ಧದಲ್ಲೇ ಸಭೆ ಬಿಟ್ಟು ಹೊರಟು, ಅಪೂರ್ಣ ಮಾಹಿತಿಯ ಆಧಾರದ ಮೇಲೆ ಪ್ರೆಸ್ ಮೀಟ್ ನಡೆಸಿ ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ, ಪೂರ್ತಿಯಾಗಿ ಕೂತಿದ್ದರೆ ಅವರಿಗೆ ಈ ರೀತಿ ಗೊಂದಲ ಆಗ್ತಾ ಇರ್ಲಿಲ್ಲ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯ್ ರಾಜ್ ಆರೋಪಿಸಿದರು.
ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಗಳಿಗೆ ಉತ್ತರ ನೀಡುವ ಸಲುವಾಗಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ ಅವರು, “ಬಿಜೆಪಿ ಜಾತಿ ಸಮೀಕ್ಷೆ ಕುರಿತು ಗೊಂದಲ ಸೃಷ್ಟಿಸುತ್ತಿದೆ. 1.55 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಮನೆಮನೆಗೆ ಮೆಸ್ಕಾಂ ಬಿಲ್ ಕಲೆಕ್ಟರ್ ಸ್ಟಿಕ್ಕರ್ ಅಂಟಿಸುವ ಮೂಲಕ ಯಾವುದೇ ಮನೆ ಬಿಟ್ಟುಹೋಗದಂತೆ ವ್ಯವಸ್ಥೆ ಮಾಡಲಾಗಿದೆ. ಸಮೀಕ್ಷೆಗೆ ವಿಶೇಷ ಆಪ್ ಸಿದ್ಧಗೊಂಡಿದೆ. ಒಟ್ಟು 60 ಪ್ರಶ್ನೆಗಳಿರುವ ಈ ಸಮೀಕ್ಷೆ ಕೇವಲ ಜಾತಿ ಕುರಿತದ್ದಲ್ಲ; ವಿದ್ಯಾಭ್ಯಾಸ, ಆರ್ಥಿಕ ಸ್ಥಿತಿ, ವೃದ್ಧಾಪ್ಯ ವೇತನ, ಉದ್ಯೋಗ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಹಿಂದುಳಿದ ವರ್ಗಗಳ ಏಳಿಗೆಗೆ ಬಳಸಲಾಗುತ್ತದೆ,” ಎಂದರು.
ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಿಂದುಳಿದ ವರ್ಗಗಳ ಪರವಾ, ವಿರೋಧಿಗಳಾ ಎಂದು ಸ್ಪಷ್ಟಪಡಿಸಬೇಕೆಂದು ಅವರು ಸವಾಲು ಹಾಕಿದ ಅವರು, “ಮಾಹಿತಿ ಇಲ್ಲದಿದ್ದರೆ ಕೇಳಿ, ಆದರೆ ಸುಳ್ಳು ಹೇಳಿ ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ಸಭೆಯಲ್ಲಿ ಕೊನೆಯವರೆಗೂ ಕೂತಿದ್ದರೆ ಕಾಮತ್ ಅವರಿಗೆ ವಿಷಯ ಅರ್ಥವಾಗುತ್ತಿತ್ತು,” ಎಂದು ವಿನಯ್ ರಾಜ್ ಕುಟುಕಿದರು.
ಮರಳಿನ ಸಮಸ್ಯೆಯ ಕುರಿತು ಕಾಮತ್ ಸರ್ಕಾರವನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸ್ಯಾಂಡ್ ಬಜಾರ್ ಆಪ್ ಮೂಲಕ ಸಮಸ್ಯೆ ಬಗೆಹರಿಸಲ್ಪಟ್ಟಿತ್ತು ಎಂದು ನೆನಪಿಸಿದರು. “ಅಕ್ರಮ ಗಣಿಗಾರಿಕೆಯ ಪರವಾಗಿರಬೇಡಿ, ಜನರ ಪರವಾಗಿರಿ. ಮುಂದೆ ಖಾದರ್ ಮತ್ತು ಗುಂಡೂರಾವ್ ಅವರ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತವಾಗಿ ಮರಳು, ಕಲ್ಲು ದೊರೆಯಲಿದೆ,” ಎಂದು ಹೇಳಿದರು.
ಸ್ಪೀಕರ್ ಆಗಿರುವ ಖಾದರ್‌ಗೆ ಮಾತಾಡಲು ಯಾವ ಹಕ್ಕು ಇದೆ ಎಂದು ಕಾಮತ್ ಕೇಳಿದ್ದಾರೆ. ಕಾಮತರೇ ನಿಮಗಿಂತ ಮುಂಚೆಯೇ ಶಾಸಕರಾಗಿದ್ದಾರೆ. ಅವರ ಪ್ರಬುದ್ಧತೆ ನಿಮಗಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯ ಹಕ್ಕು ಎನ್ನುವುದನ್ನು ಅವರು ಮರೆತಿಲ್ಲ. ಅವರು ಈ ಮಣ್ಣಿನ ಮಗ, ತುಳುವ, ಇದೇ ರೀತಿ ಮುಂದೆಯೂ ಜನರ ಆಶೋತ್ತರಗಳಿಗೆ ಸ್ಪಂದನೆ ಕೊಡ್ತಾರೆ ಎಂದರು. ಆಯೋಗಗಳ ಸಭೆಗೆ ಖಾದರ್ ಹೇಗೆ ಭಾಗವಹಿಸಿದ್ದಾರೆ ಎಂದು ಕೇಳುವ ಕಾಮತ್ ಅವರೇ, ಮೊನ್ನೆ ನಡೆದಿರುವುದು ಹಿಂದುಳಿದ ವರ್ಗಗಳ ರಾಜಕೀಯ ರಹಿತ ಸಭೆ. ಹಾಗಾಗಿ ಸ್ಪೀಕರ್ ಅದರಲ್ಲಿ ಭಾಗವಹಿಸಿದ್ದಾರೆ. ಸ್ಪೀಕರ್‌ಗೆ ಈ ಬಗ್ಗೆ ಮಾಹಿತಿ ಇದೆ, ನಿಮಗೆ ಆ ಮಾಹಿತಿ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬರ್ತಾ ಇಲ್ಲ ಎಂದು ಸುಳ್ಳು ಹೇಳುವುದು ಸರಿಯಲ್ಲ. ಸಿಎಂ ಅವರು 200 ಕೋಟಿ ಹಣ ಕೊಟ್ಟಿದ್ದಾರೆ ಎನ್ನುವುದ ನಿಮಗೂ ಗೊತ್ತಿದೆ ಎಂದರು.
ಇದೇ ವೇಳೆ ಮಂಗಳೂರು ದಸರಾ ಹಬ್ಬಕ್ಕೆ ಹಾಕಲಾಗಿದ್ದ ಫ್ಲೆಕ್ಸ್ ತೆರವುಗೊಳಿಸುವ ವಿಚಾರವನ್ನು ಉದಾಹರಿಸಿ, ಅದಕ್ಕೆ ಕಾಮತ್ ಕುಮ್ಮಕ್ಕು ಇದೆ ಎಂಬ ಜನರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು. “ಇದು ನಾಡಹಬ್ಬ, ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಕಾಮತ್ ಜನರ ಪರವಾಗಿ ಧ್ವನಿ ಎತ್ತಬೇಕಿತ್ತು,” ಎಂದು ವಿನಯ್ ರಾಜ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಲವರಿದ್ದರು.
ಜಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ….
ಧರ್ಮವನ್ನು ಬದಲಾವಣೆ ಮಾಡ್ಲಿಕ್ಕೆ ಸಾಧ್ಯವಿದೆ. ಆದರೆ ಜಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಒಬ್ಬ ಹಿಂದೂ, ಕ್ರೈಸ್ತ ಅಥವಾ ಮುಸ್ಲಿಂ ಯಾವುದೇ ಧರ್ಮವನ್ನು ಆಲಿಂಗನ ಮಾಡ್ವಬಹುದು. ಆದರೆ ಜಾತಿ ಹಾಗಲ್ಲ, ಜಾತಿ ಎನ್ನುವುದು ವಂಶವಾಹಿನಿಯಾಗಿ ಬರುವಂತದ್ದು. ಹಾಗಾಗಿ ಆತ ಬೇರೆ ಧರ್ಮಕ್ಕೆ ಮತಾಂತರ ಹೊಂದಿದರೂ ಜಾತಿ ಬದಲಾವಣೆ ಮಾಡ್ಲಿಕ್ಕೆ ಆಗುವುದಿಲ್ಲ. ಇದು ನೆಲದ ಕಾನೂನು ಎಂದು ಎ.ಸಿ. ವಿನಯ್ ರಾಜ್ ಹೇಳಿದರು.
ಒಬ್ಬ ವ್ಯಕ್ತಿ ಯಾವ ಜಾತಿಯಲ್ಲಿ ಹುಟ್ತಾನೋ ಅವನು ಅದೇ ಜಾತಿಯಲ್ಲೇ ಉಳಿಯುತ್ತಾನೆ. ಉದಾಹರಣೆಗೆ ಒಬ್ಬ ಲಿಂಗಾಯಿತ ಕ್ರೈಸ್ತ ಧರ್ಮಕ್ಕೆ ಬಂದ್ರೂ ಅವನ ಜಾತಿ ಲಿಂಗಾಯಿತನಾಗಿಯೇ ಉಳಿಯುತ್ತದೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದರೂ ಆತ ಜಾತಿ ಕೇಳುವಾಗ ತನ್ನ ಹಿಂದಿನ ಜಾತಿಯನ್ನು ಹೇಳುತ್ತಾನೆ. ಪಚ್ಚನಾಡಿ ಕಾರ್ಪೊರೇಟರ್ ಸಂಗೀತ ನಾಯ್ಕ್ ಯಾವ ಮತದವರು ಆಗಿದ್ದರು, ಆದರೂ ನಾಮಿನೇಷನ್ ಯಾವ ಕೋಟಾದಲ್ಲಿ ಹಾಕಿದ್ದರು ಎನ್ನುವುದು ನಿಮಗೆ ಗೊತ್ತಿದೆ. ಇದು ಕ್ರೈಸ್ತರನ್ನು ಜಾತಿಗೆ ಸೇರಿಸುವ ಹುನ್ನಾರ ಅಲ್ಲ. ಒಂದು ವೇಳೆ ನಾನು ಬಿಲ್ಲವ ಆಗಿದ್ದಿದ್ದರೆ ಅದು ರಕ್ತದಲ್ಲಿಯೇ ಉಳಿಯುತ್ತದೆ ಎಂದರು.
ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಮೀಸಲಾತಿ ಸಿಗ್ಬೇಕಾ ಬೇಡ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಹಿಂದುಳಿದ ವರ್ಗಗಳ ಆಯೋಗ ನಿರ್ಧಾರಕ್ಕೆ ತೆಗೆದುಕೊಳ್ಳುತ್ತದೆ. ಮುಸ್ಲಿಂ, ಕ್ರೈಸ್ತರಲ್ಲಿ ಜಾತಿ ಇಲ್ಲ. ಮೀಸಲಾತಿ ವಿಚಾರವಾಗಿ ನ್ಯಾಯಾಲಯ ತೀರ್ಮಾನ ಕೊಡುತ್ತದೆ. ಮತಾಂತರ ಆದ್ರೂ ಜಾತಿ ಉಳಿಯುತ್ತದೆ. ಮೀಸಲಾತಿ ಕುರಿತಂತೆ ವರದಿಯಲ್ಲಿ ಏನು ಬರ್ತದೆ ಅಂತ ಕಾದು ನೋಡೋಣ. ಕ್ರೈಸ್ತ ಧರ್ಮದವರು ಜಾತಿ ಮೆನ್ಷನ್ ಮಾಡುವುದಿಲ್ಲ. ನಾನೊಬ್ಬ ಕ್ರಿಶ್ಚಿಯನ್. ನನ್ನ ಜಾತಿ ಧರ್ಮ ಎಲ್ಲವೂ ಕ್ರಿಶ್ಚಿಯನ್. ಜಾತಿ ಕಾಲಂ ಅನ್ನು ಬ್ಲ್ಯಾಂಕ್ ಬಿಡ್ತೇನೆ. ಜಾತಿಯನ್ನು ಕೊಡುವವರು ಕೊಡಲಿ, ಇಲ್ಲವಾದರೆ ಬಿಡಲಿ ಅದು ಅವರವರ ಇಷ್ಟ ಎಂದು ವಿನಯ್ ರಾಜ್ ನುಡಿದರು.