ಕೆಂಪು ಕಲ್ಲು ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮ – ಬಿಜೆಪಿ ಕೇವಲ ನಟನೆ: ಕಾಂಗ್ರೆಸ್

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆ ಸಂಬಂಧಿತ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಆದರೂ ಬಿಜೆಪಿ ಶಾಸಕರು ಜನರ ಗಮನ ಬೇರೆಡೆಗೆ ತಿರುಗಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. “ಬಿಜೆಪಿಗೆ ಜನರ ಬಗ್ಗೆ ನಿಜವಾದ ಕಾಳಜಿ ಇಲ್ಲ, ಕೇವಲ ರಾಜಕೀಯ ನಟನೆ ಮಾತ್ರ ನಡೆಯುತ್ತಿದೆ” ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಕ್ಷಿಣ ಕನ್ನಡ ಸಂಸದರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುವ ಬದಲು ತಮ್ಮ ಮಟ್ಟಿಗೆ ಸಾಧ್ಯವಾದ ಕೆಲಸ ಮಾಡಬಹುದಿತ್ತು. ಸಿಆರ್‌ಝೆಡ್ ನಿಯಮ ಸಡಿಲಗೊಳಿಸಲು ಒತ್ತಡ ಹೇರುವ ಅವಕಾಶವಿತ್ತು. ಆದರೆ ಅದನ್ನು ಬಿಟ್ಟು ಬಿಜೆಪಿ ನಾಯಕರು ಆರೋಪ ರಾಜಕೀಯದಲ್ಲಿ ತೊಡಗಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಹೊಂಡಗಳಲ್ಲಿ ಜನ ಪರದಾಡುತ್ತಿದ್ದಾರೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ಬಗ್ಗೆ ಮೌನವಾಗಿಯೇ ಇದೆ” ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪದ್ಮರಾಜ್ ಮಾತನಾಡಿ, “ಸಾಮಾಜಿಕ ನ್ಯಾಯ ಸಾಧನೆಗಾಗಿ ಸರಕಾರ ಜಾತಿ ಜನಗಣತಿ ಆರಂಭಿಸಿದೆ. ಇದಕ್ಕೂ ಬಿಜೆಪಿ ವಿರೋಧ ತೋರಿಸುತ್ತಿರುವುದು ಆಶ್ಚರ್ಯಕರ. ಅಭಿವೃದ್ಧಿ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಮುಹಮ್ಮದ್ ಮೋನು, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ ಮತ್ತಿತರರು ಭಾಗವಹಿಸಿದ್ದರು.

error: Content is protected !!