ಕಾರವಾರ: ಪೊಲೀಸರು ಸುಚಿತ್ರಾಳ ಮೊಬೈಲ್ ಫೋನ್ ಅನ್‌ಲಾಕ್ ಮಾಡಿದಾಗ ಕಂಡ ದೃಶ್ಯಕ್ಕೆ ಅವರೇ ದಪ್ಪಗಣ್ಣು ಬಿಟ್ಟಿದ್ದಾರೆ. ಆ ಸ್ಕ್ರೀನ್ ಮೇಲೆ ಹರಿದಾಡುತ್ತಿದ್ದುದು ಬರೀ ಮೆಸೇಜುಗಳಲ್ಲ, ಅವು ಹತ್ತಾರು ಸಂಸಾರಗಳನ್ನು ಬೀದಿಗೆ ತರುವ ‘ಬಾಂಬ್’ಗಳು! ಜ್ಯೋತಿಷಿ ಕಮಲಾಕರ ಭಟ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು, ಅಮಾಯಕನ ಕೊಲೆ ಮಾಡಿಸಿ ಈಗ ಕಂಬಿ ಎಣಿಸುತ್ತಿರುವ ಈಕೆಯ ಮುಖವಾಡ ಒಂದೊಂದಾಗಿ ಕಳಚಿ ಬೀಳುತ್ತಿದೆ.

ಸುರೇಖಾ ಸುಚಿತ್ರಾ ಆದ ಕತೆ!
ಈಕೆಯ ನಿಜವಾದ ಹೆಸರು ಸುರೇಖಾ ಅಂತ. ಮದುವೆ ಸರ್ಟಿಫಿಕೇಟ್ ಮೇಲೆ ಅದೇ ಹೆಸರಿದೆ. ಆದರೆ, ಈಕೆಗೆ ಬೇಕಾಗಿದ್ದುದು ‘ಸುಚಿತ್ರಾ’ ಎಂಬ ಗ್ಲಾಮರಸ್ ಇಮೇಜ್. ಸೋಶಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರನ್ನು ಬೇಟೆಯಾಡಲು ಈಕೆ ಹೊಸಬಣ್ಣ ಹಚ್ಚಿಕೊಂಡಿದ್ದಳು. “ಅಕ್ಕ ಸತ್ತಿದ್ದಾಳೆ, ನಾನು ಇನ್ನು ಕನ್ಯೆ!” ಯಾರಾದರೂ ಹುಡುಗರು ಸಲುಗೆ ಬೆಳೆಸಲು ಬಂದರೆ ಈಕೆ ಹೆಣೆಯುತ್ತಿದ್ದ ಸುಳ್ಳು ಅಂತಿಂತದ್ದಲ್ಲ. “ಸುರೇಖಾ ಅನ್ನೋಳು ನನ್ನ ಟ್ವಿನ್ ಸಿಸ್ಟರ್. ಅವಳು ಸತ್ತು ಹೋಗಿದ್ದಾಳೆ, ಈಗ ಅವಳ ಮಕ್ಕಳನ್ನು ನಾನೇ ಸಾಕ್ತಾ ಇದ್ದೀನಿ. ನನಗಿನ್ನು ಮದುವೆಯಾಗಿಲ್ಲ” ಅಂತ ಕಣ್ಣೀರು ಹಾಕುತ್ತಿದ್ದಳು. ಈಕೆಯ ಕಣ್ಣೀರಿನಲ್ಲಿ ಮಿಂದೆದ್ದ ಎಷ್ಟೋ ಹುಡುಗರು ಆಕೆಯ ಮಾಯಾಜಾಲಕ್ಕೆ ಬಿದ್ದು ಹೋಗಿದ್ದರು.

ಫೇಸ್‌ಬುಕ್‌ನಲ್ಲಿ ‘ಫೋಟೋ’ ಕಾಮೆಂಟ್, ಆಮೇಲೆ ಮನೆಗೆ ಇನ್ವಿಟೇಶನ್! ಈಕೆಯ ತಂತ್ರಗಾರಿಕೆ ಬಹಳ ಸಿಂಪಲ್ ಆಗಿತ್ತು. ಮೊದಲು ಹ್ಯಾಂಡ್ಸಮ್ ಹುಡುಗರ ಫೋಟೋಗಳಿಗೆ ಒಂದು ಕಾಮೆಂಟ್ ಹಾಕೋದು. ಮೆಸೆಂಜರ್‌ನಲ್ಲಿ ಮೆಲ್ಲಗೆ ಮಾತು ಶುರು ಮಾಡೋದು. ಅವನ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅಂತ ತಿಂಗಳಾನುಗಟ್ಟಲೆ ಚಾಟ್ ಮಾಡಿ ಪತ್ತೆ ಹಚ್ಚೋದು. ಪೂರ್ತಿ ನಂಬಿಕೆ ಬಂದ ಮೇಲೆ, “ಒಮ್ಮೆ ಭೇಟಿಯಾಗೋಣ” ಅಂತ ಮನೆಗೆ ಕರೆಯೋದು!

ಯಾರಿದ್ದಾರೆ ಈ ಪಟ್ಟಿಯಲ್ಲಿ?
ಈಕೆಯ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಬರೀ ಪಡ್ಡೆ ಹುಡುಗರು ಮಾತ್ರ ಇರಲಿಲ್ಲ. ಅದರಲ್ಲಿ ಸಿದ್ದಾಪುರ, ಶಿರಸಿ ಅಷ್ಟೇ ಯಾಕೆ, ಇಡೀ ರಾಜ್ಯದ ಪ್ರಭಾವಿ ವ್ಯಕ್ತಿಗಳ ಹೆಸರುಗಳೂ ಇವೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆಕೆ ಕೇವಲ ‘ಅಕ್ಕ-ತಂಗಿ’ ಕಥೆ ಹೇಳಿ ಯುವಕರನ್ನು ಮರುಳು ಮಾಡುತ್ತಿರಲಿಲ್ಲ; ಬದಲಾಗಿ ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ‘ಹನಿ ಟ್ರ್ಯಾಪ್’ ಮಾಡಲೆಂದೇ ಒಂದು ಸಣ್ಣ ಗ್ಯಾಂಗ್ ಕಟ್ಟಿಕೊಂಡಿದ್ದಳಾ ಎಂಬ ಸಂಶಯ ಈಗ ದಟ್ಟವಾಗಿದೆ. ಸುಚಿತ್ರಾ ಜೊತೆ ಚಾಟಿಂಗ್ ಮಾಡಿದ್ದ ಎಷ್ಟೋ ಜನ ಈಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾರೆ. ಪೊಲೀಸರು ಯಾರಿಗೆ ಯಾವಾಗ ನೋಟಿಸ್ ಕೊಡುತ್ತಾರೋ ಎಂಬ ಭಯ ಅವರಲ್ಲಿ ಮನೆ ಮಾಡಿದೆ. ಸದ್ಯಕ್ಕೆ ಈ ‘ಸಿದ್ದಾಪುರದ ಸುಂದರಿ’ ಈಗ ಪೊಲೀಸರ ಅತಿಥಿ. ಆಕೆ ಹಚ್ಚಿದ ಈ ಕಿಚ್ಚು ಇನ್ಯಾರ ಮನೆ ಸುಡುತ್ತದೋ ಕಾದು ನೋಡಬೇಕು.
