ಧರ್ಮಸ್ಥಳ: ಒಂಬತ್ತು ಸ್ಥಳಗಳಲ್ಲಿ ಮಾನವ ಕಳೇಬರ ಪತ್ತೆ?

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ತೀರದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ನಡೆಸಿದ ಕಾರ್ಯಾಚರಣೆಯ ವೇಳೆ ಒಂಬತ್ತು ಸ್ಥಳಗಳಲ್ಲಿ ಮಾನವ ಅವಶೇಷಗಳು ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಎಸ್‌ಐಟಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಸೆಪ್ಟೆಂಬರ್ 17ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ವಿಭಿನ್ನ ಸ್ಥಳಗಳಲ್ಲಿ ಮಾನವನ ಕಳೇಬರಗಳು ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದಾರೆ. ಪತ್ತೆಯಾದ ಕಳೇಬರಗಳನ್ನು ವೈಜ್ಞಾನಿಕ ಪರಿಶೀಲನೆ ಮತ್ತು ಗುರುತು ಪತ್ತೆ ಹಚ್ಚುವ ಉದ್ದೇಶದಿಂದ ಮುಂದಿನ ಹಂತದ ತನಿಖೆಗೆ ಒಳಪಡಿಸಲಾಗುತ್ತಿದೆ.

ಎಸ್‌ಐಟಿ ತಂಡವು ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆಯನ್ನು ಹಗಲು-ರಾತ್ರಿ ನಡೆಸುತ್ತಿದೆ. ಅರಣ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ, ಭೂಮಿಯ ಮೇಲ್ಭಾಗದಲ್ಲಿ ಹರಡಿರುವ ಅಸ್ಥಿಪಂಜರಗಳ ಅವಶೇಷಗಳು ಮತ್ತು ಮಾನವ ದೇಹದ ಕೆಲವು ಭಾಗಗಳು ಪತ್ತೆಯಾಗಿವೆ. ಊಟದ ವಿರಾಮವನ್ನೂ ಪಡೆಯದೆ ನಿರಂತರವಾಗಿ ಮೂರು ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಮೂಳೆಗಳ ಅವಶೇಷಗಳು ದೊರೆತ ಎಲ್ಲಾ ಸ್ಥಳಗಳಲ್ಲೂ ಮಹಜರು ಪ್ರಕ್ರಿಯೆ ನಡೆಸಲಾಯಿತು.

error: Content is protected !!