ಬುಲಂದ್‌ಶಹರ್(ಉತ್ತರ ಪ್ರದೇಶ): ಬಿಜೆಪಿ ಮುಖಂಡನೋರ್ವನನ್ನು ದುಷ್ಕರ್ಮಿಗಳ ತಂಡ ಭೀಕರವಾಗಿ ಕೊಚ್ಚಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ವಿನೋದ್ ಚೌಧರಿ (50) ಕೊಲೆಗೀಡಾದವರು. ರಕ್ತಸಿಕ್ತ ಶವ ಪಕ್ಷದ ಕಚೇರಿಯ ಕೋಣೆಯ ಹಾಸಿಗೆಯ ಮೇಲೆ ಪತ್ತೆಯಾಗಿತ್ತು.
ಘಟನೆಯ ವಿವರ: ಖುರ್ಜಾದ ಮಾಜಿ ಬಿಜೆಪಿ ಬ್ಲಾಕ್ ಪ್ರಮುಖ್ ಆಗಿದ್ದ ವಿನೋದ್ ಚೌಧರಿ ಅವರನ್ನು ಕಳೆದ ರಾತ್ರಿ ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಕಚೇರಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿನೋದ್ ಚೌಧರಿ ಕಳೆದ ಹಲವು ದಿನಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರ ಪತ್ನಿ ಮತ್ತು ಮಕ್ಕಳು ದೆಹಲಿಯಲ್ಲಿದ್ದಾರೆ. ಬೆಳಿಗ್ಗೆ ಎಷ್ಟು ಹೊತ್ತಾದರೂ ಕಚೇರಿಯ ಬಾಗಿಲು ತೆರೆಯದೇ ಇದ್ದಾಗ ನೆರೆಹೊರೆಯವರು ಕಿಟಕಿ ಮೂಲಕ ಇಣುಕಿ ನೋಡಿದ್ದು, ಘಟನೆ ತಿಳಿದು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಂಕ್ಷನ್ ರಸ್ತೆಯ ಜಾಹಿದ್‌ಪುರ್ ಕಲಾ ಗ್ರಾಮದಲ್ಲಿರುವ ಪಕ್ಷದ ಕಚೇರಿಯಲ್ಲಿ ವಿನೋದ್ ಅವರ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದರ ಕುರಿತು ಅವರ ಸಹೋದರ ಬಂಟಿ, ತಕ್ಷಣ ನಮಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ನೋಡಿದಾಗ ಕತ್ತು ಸೀಳಿ ಕೊಲೆಗೈದ ರೀತಿಯಲ್ಲಿ ವಿನೋದ್ ಶವ ಸಿಕ್ಕಿದೆ. ಕುತ್ತಿಗೆಯಲ್ಲಿ ಆಳ ಗಾಯದ ಗುರುತುಗಳು ಕಂಡುಬಂದಿವೆ. ವಿನೋದ್ ಸಾವಿನ ಬಗ್ಗೆ ದೆಹಲಿಯಲ್ಲಿರುವ ಅವರ ಪತ್ನಿ ಮತ್ತು ಮಕ್ಕಳಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಕೆಲವು ಸುಳಿವುಗಳು ಪತ್ತೆಯಾಗಿವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಗ್ರಾಮೀಣ ಎಸ್ಪಿ ಡಾ. ತೇಜ್‌ವೀರ್ ಸಿಂಗ್ ಹೇಳಿದರು.
ವಿನೋದ್ ಚೌಧರಿ ವಿರುದ್ಧ ಕ್ರಿಮಿನಲ್ ಕೇಸ್: ವಿನೋದ್ ಚೌಧರಿ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅವರು ಹಿಂದೆಯೂ ಜೈಲಿಗೆ ಹೋಗಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಕೊಲೆ ಹಿಂದೆ ಹಳೆಯ ದ್ವೇಷ ಇರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ತೇಜ್‌ವೀರ್ ಸಿಂಗ್, ಘಟನೆಯ ತನಿಖೆಗೆ ಪೊಲೀಸರು ಐದು ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದಿದ್ದಾರೆ.