ಶಿವಮೊಗ್ಗ: ನಗರದ ಹೊರವಲಯ ಮಲವಗೊಪ್ಪದಲ್ಲಿ ರಸ್ತೆ ಗುಂಡಿಗೆ ಬಿದ್ದು ಮೆಡಿಕಲ್ ರೆಪ್ ಸಾವನ್ನಪ್ಪಿದ ಘಟನೆ ಭಾನುವಾರ (ಸೆ.14) ರಾತ್ರಿ ನಡೆದಿದೆ.
ಮಹೇಶ್ ಮೃತ ವ್ಯಕ್ತಿ.
ಮಹೇಶ್ ತಮ್ಮ ಎಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಆಳವಾದ ಗುಂಡಿಯನ್ನು ತಪ್ಪಿಸಲು ಯತ್ನಿಸಿದ ವೇಳೆ ಬೈಕ್ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ಹೊಂಡಕ್ಕೆ ಬಿದ್ದಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಮಹೇಶ್‌ರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಿಸದೇ ಅವರು ಸಾವಿಗೀಡಾಗಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮಹೇಶ್ ಅವರಿಗೆ ಪತ್ನಿ ಹಾಗೂ ಪುಟ್ಟ ಮಗುವಿದೆ.
ಮಲವಗೋಪ್ಪ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಗುಂಡಿಗಳಿವೆ. ಸಾರ್ವಜನಿಕರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ. ಈ ಕಾರಣದಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಅಪಘಾತಗಳು ಹೆಚ್ಚಾಗಿವೆ. ಮಹೇಶ್ ಅವರ ಸಾವಿಗೆ ಸಾರ್ವಜನಿಕರು ರಸ್ತೆ ನಿರ್ವಹಣೆಯ ಕೊರತೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.