ಉಳ್ಳಾಲ: ಸೌದಿ ಅರೇಬಿಯಾದಲ್ಲಿ ಬಸ್- ಬಸ್‌ಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಳ್ಳಾಲದ ನಿವಾಸಿ ಮೃತಪಟ್ಟ ಘಟನೆ ಸೆ.14ರಂದು ಸಂಭವಿಸಿದೆ.
ಉಳ್ಳಾಲ ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಮೃತ ದುರ್ದೈವಿ.
ಸೌದಿ ಅರೇಬಿಯಾದಲ್ಲಿ ಅಬ್ದುಲ್ ರಾಝಿಕ್ ಸೆ.14ರಂದು ಸಂಜೆ ರಾತ್ರಿ ಪಾಳಿ ಕೆಲಸಕ್ಕೆಂದು ಬಸ್ ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಇವರು ಸಂಚರಿಸುತ್ತಿದ್ದ ಬಸ್ಸಿಗೆ ಇನ್ನೊಂದು ಬಸ್ ಢಿಕ್ಕಿ ಹೊಡೆದಿದ್ದು, ರಾಝಿಕ್ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮುಹಮ್ಮದ್ ರ ಕೊನೆಯ ಪುತ್ರರಾಗಿರುವ ರಾಝಿಕ್, ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಸೌದಿ ಅರಬಿಯಾದ ಜುಬೈಲ್ ನಲ್ಲಿ ಪಾಲಿಟೆಕ್ ಎಂಬ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಜುಲೈ 11ರಂದು ಊರಿಗೆ ಬಂದು, ಒಂದು ತಿಂಗಳ ರಜೆ ಮುಗಿಸಿ ಮತ್ತೆ ವಿದೇಶಕ್ಕೆ ತೆರಳಿದ್ದರು.
ರಾಝಿಕ್ ಅವರ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಅನಾರೋಗ್ಯ ನಿಮಿತ್ತ ಈ ಹಿಂದೆಯೇ ಮೃತಪಟ್ಟಿದ್ದರು. ಮೃತರು ತಂದೆ ತಾಯಿ, ಮೂವರು ಸಹೋದರಿಯರು, ಒಬ್ಬ ಸಹೋದರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.