ಮುಂಬೈ: ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಹಾಗೂ ರಿಯಾಲಿಟಿ ಟಿವಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ತಮ್ಮ ಆರೋಗ್ಯ ಮತ್ತು ಯೋಗಾಭ್ಯಾಸಗಳ ಮೂಲಕ ಸದಾ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಶೇಷ ಉಸಿರಾಟ ತಂತ್ರ — ಭ್ರಾಮರಿ ಪ್ರಾಣಾಯಾಮ (ಹಮ್ಮಿಂಗ್ ಬೀ ಬ್ರೀಥಿಂಗ್) ದ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.
ಶಿಲ್ಪಾ ತಮ್ಮ ವಿಡಿಯೋದಲ್ಲಿ, “ಕಿವಿ, ಕಣ್ಣು ಮುಚ್ಚಿ, ನಾಲಿಗೆಯನ್ನು ಬಾಯಿಯ ಮೇಲ್ಭಾಗಕ್ಕೆ ಸ್ಪರ್ಶಿಸಿ, ಆಳವಾಗಿ ಉಸಿರೆಳೆದು ʻಹಂʼ ಎಂದು ಶಬ್ದ ಮಾಡಿ” ಎಂದು ಅಭ್ಯಾಸ ವಿಧಾನವನ್ನು ವಿವರಿಸಿದರು.
ಅವರ ಪ್ರಕಾರ, ಭ್ರಾಮರಿ ಉಸಿರಾಟ ಅತ್ಯಂತ ಶಕ್ತಿಶಾಲಿ ಪ್ರಾಣಾಯಾಮಗಳಲ್ಲಿ ಒಂದು. ಭಾವನೆಗಳನ್ನು ನಿಯಂತ್ರಿಸಲು, ಆತಂಕ ಹಾಗೂ ಖಿನ್ನತೆಯನ್ನು ಕಡಿಮೆ ಮಾಡಲು, ಆಲ್ಝೈಮರ್ ರೋಗಿಗಳಿಗೆ ಸಹಾಯ ಮಾಡಲು, ರಕ್ತದೊತ್ತಡವನ್ನು ಸಮತೋಲನಗೊಳಿಸಲು, ಉರಿಯೂತ ತಗ್ಗಿಸಲು ಮತ್ತು ಸಂಧಿವಾತದಿಂದ ಬಳಲುವವರಿಗೆ ಲಾಭಕರವಾಗುತ್ತದೆ ಎಂದಿದ್ದಾರೆ.
ಇದೇ ರೀತಿಯಲ್ಲಿ, ಇದು ಮೆದುಳಿಗೆ ಆಮ್ಲಜನಕದ ಹರಿವು ಹೆಚ್ಚಿಸಿ, ರಕ್ತ ಪರಿಚಲನೆ ಸುಧಾರಿಸಿ, ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು.
ಅವರು ಕನಿಷ್ಠ 5 ರಿಂದ 11 ಸುತ್ತುಗಳವರೆಗೆ ಈ ಉಸಿರಾಟ ಅಭ್ಯಾಸ ಮಾಡುವಂತೆ ಶಿಫಾರಸು ಮಾಡಿದ್ದು, ಹೆಚ್ಚಿನದನ್ನು ಬಯಸುವವರು ಇನ್ನಷ್ಟು ಮುಂದುವರಿಸಬಹುದು ಎಂದು ಸಲಹೆ ನೀಡಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಭ್ರಾಮರಿ ಉಸಿರಾಟವು ತಕ್ಷಣವೇ ಶಾಂತಿ ನೀಡುವ ಯೋಗ ವಿಧಾನವಾಗಿದ್ದು, ಒತ್ತಡ, ಆತಂಕ ಮತ್ತು ಕೋಪ ನಿಯಂತ್ರಣಕ್ಕೆ ಪರಿಣಾಮಕಾರಿ.