ಮುಂದುವರಿದ ಕಟೀಲು ಗೋಣಿ ಗಲಾಟೆ: ರೇಷನ್‌ ಅಂಗಡಿ ಮಾಲಕಿಯ ಆರೋಪಕ್ಕೆ ಕೌಂಟರ್!

ಮಂಗಳೂರು: ಇತ್ತೀಚೆಗೆ ಕಟೀಲು ರೇಷನ್ ಅಂಗಡಿಯಲ್ಲಿ ‌ʻಅಕ್ಕಿ ಜೊತೆಗೆ ಗೋಣಿನೂ ಕೊಡ್ಬೇಕುʼ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬೆನ್ನಲ್ಲೇ ನ್ಯಾಯ ಬೆಲೆ ಅಂಗಡಿ ದೀಪಾ ನಾಯಕ್‌ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪಡಿತರ ವಿತರಕರ ಸಂಘದ ಜೊತೆ ಸುದ್ದಿಗೋಷ್ಠಿ ನಡೆಸಿ, ವಿಡಿಯೋ ವೈರಲ್‌ ಮಾಡಿದ ಸತೀಶ್‌ ಎಂಬವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ತಾನು ಮಾಡಿಟ್ಟಿದ್ದ ವಿಡಿಯೋವನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

ಇದೀಗ ದೀಪಾ ನಾಯ್ಕ್‌ ಆರೋಪಕ್ಕೆ ಪ್ರತಿಯಾಗಿ ಸತೀಶ್ ಹಾಗೂ ಅವರ ಕುಟುಂಬಸ್ಥರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕೌಂಟರ್‌ ಕೊಟ್ಟಿದ್ದಲ್ಲದೆ, ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಕಟೀಲಿನಲ್ಲಿ ಹಲವು ವರ್ಷಗಳಿಂದ ಮಂಜುನಾಥ ನಾಯಕ್ ಎಂಬುವವರು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದರು. ಆದರೆ ಇತ್ತೀಚಿಗೆ ಸಮಸ್ಯೆಗಳು ಉದ್ಭವವಾಗಿದೆ. ನಾನು ತಾಯಿಯ ಜೊತೆ ರೇಷನ್‌ ಖರೀದಿಸಲು ಬಂದಾಗ ದೀಪಾ ನಾಯಕ್‌ ಗೋಣಿಯ ಬೆಲೆ 50 ರೂ. ಕೊಡಬೇಕೆದರು. ಆಗ ನಾನು ಕಾನೂನಿನಲ್ಲಿ 50 ರೂ. ಕೇಳಲು ಅವಕಾಶ ಇದೆಯೇ ಎಂದು ಕೇಳಿದ ತಕ್ಷಣ ದೀಪಾ ಏರು ಧ್ವನಿಯಲ್ಲಿ ʻಭಾರೀ ಕಾನೂನು‌ ಮಾತಾಡ್ತೀಯ? ಇನ್ನು ಮಾತಾಡಿದರೆ ನಿನ್ನ ರೇಷನ್ ಕಾರ್ಡ್ ರದ್ದು‌ಮಾಡುತ್ತೇನೆʼ ಎಂದು ಬೆದರಿಸಿದಾಗ ನಮ್ಮ ಮಧ್ಯೆ ಮಾತಿನ ಚಕಮಕಿ ನಡೆಯಿತು ಎಂದು ಸತೀಶ್‌ ಪ್ರತ್ಯಾರೋಪಿಸಿದ್ದಾರೆ.

ನಾನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಾರಂಭಿಸಿದ ಕೂಡಲೇ ಗೋಣಿಯ ಬೆಲೆ 20 ರೂ.ಗೆ ಇಳಿಸಿದರೂ ನಾನು ವಿಚಾರಿಸಿದರೂ ಗೋಣಿ ಚೀಲದ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಕೂಡಲೇ ನಾನು ಆಹಾರ ಅಧಿಕಾರಿ, ಗ್ರಾಮಕರಣಿಕರು ಮತ್ತಿತರ ಅಧಿಕಾರಿಗಳನ್ನು ಕರೆಸಿದಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಸರಕಾರದ ಆದೇಶದ ಸ್ಪಷ್ಟನೆ ನೀಡಿದ ನಂತರ ನಮಗೆ ಸರಕಾರ ಆದೇಶ ಸ್ಪಷ್ಟವಾಯಿತು ಎಂದರು.
ಇಲ್ಲಿ ಪ್ರಶ್ನೆ ಮಾಡಲು ಹೋದರೆ ಒಬ್ಬ ಪ್ರಭಾವಿ ರಾಜಕಾರಣಿಯ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. 50 ಕೆ.ಜಿ., 100 ಕೆ.ಜಿ. ಅಕ್ಕಿ ಇರುವ ಗ್ರಾಹಕರು ಗೋಣಿ ತಂದರೂ, ಅಕ್ಕಿ ಬಂದ ಗೋಣಿಯ ಮೂಟೆಯನ್ನೇ ತೆಗೆಕೊಂಡು ಹೋಗಲು ತಿಳಿಸಿ ಗೋಣಿಗೆ 50 ರೂ ಹೆಚ್ಚಿಗೆ ಹಣ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ 50 ಕೆಜಿಯ ಮೂಟೆಯಲ್ಲಿ 47 ಅಥವಾ 48 ಕೆಜಿ ಮಾತ್ರ ಇರುತ್ತದೆ ಎಂದು ಸತೀಶ್‌ ಗಂಭೀರ ಆರೋಪ ಮಾಡಿದರು.

ಸೊಸೈಟಿಗೆ ಮರ್ಜ್‌ ಮಾಡಿ

ಈ ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಸಾಮಾನುಗಳನ್ನು ಮಾರುತ್ತಾರೆ. ಗ್ರಾಹಕರ ರೆಷನ್‌ ಅಕ್ಕಿ ಖರೀದಿಸಿ ಬದಲಿಗೆ ದಿನಸಿ‌ ಸಾಮಾನುಗಳನ್ನು ಮಾರುತ್ತಾರೆ. ಈ ನ್ಯಾಯ ಬೆಲೆ ಅಂಗಡಿಯನ್ನು ಸೊಸೈಟಿಗೆ ಮರ್ಜ್ ಮಾಡಿದರೆ ಗ್ರಾಹಕರಿಗೆ ಉತ್ತಮ ಸೇವೆ ದೊರಕುತ್ತದೆ. ಅಲ್ಲದೆ ಬಜ್ಪೆ ಕಟೀಲು ರಾಜ್ಯ ಹೆದ್ದಾರಿಯ ಬದಿಯ ಮೂರು ಮಾರ್ಗಗಳು ಸೇರುವ ಜಾಗದಲ್ಲಿಯೇ ಈ ಅಂಗಡಿ ಇದ್ದು ಅತ್ಯಂತ ಅಪಾಯಕಾರಿಯಾಗಿದೆ. ಕಳೆದ ವರ್ಷ ರೇಷನ್ ಖರೀದಿಸಲು ಬಂದ ರಿಕ್ಷಾಕ್ಕೆ ಬಸ್‌ ಢಿಕ್ಕಿ ಹೊಡೆದಿತ್ತು. ಆಗಲೇ ಅಂಗಡಿಯನ್ನು ಇಲ್ಲಿಂದ ಸ್ಥಳಾಂತರಿಸುವಂತೆ ಕೇಳಿಕೊಳ್ಳಲಾಗಿತ್ತು. ಕಟೀಲಿನಲ್ಲಿ ಭಕ್ತರು ಇರ್ತಾರೆ ಅಂತ ಶುಕ್ರವಾರ ಅಕ್ಕಿ ಕೊಡುವುದಿಲ್ಲ. ನಾಲ್ಕು ಗಂಟೆ ನಂತರ ಕ್ಲೋಸ್ ಮಾಡ್ತಾರೆ. ದೀಪಾ ನಾಯಕ್ ನ್ಯಾಯ ಬೆಲೆ ಸಮಿತಿಯವರಿಗೂ ಸುಳ್ಳು ಹೇಳಿದ್ದಾರೆ. ಸಮಿತಿಯವರು ಮೊದಲು ಜನರ ಸಮಸ್ಯೆಯನ್ನು ಪರಿಶೀಲಿಸಲಿ ಎಂದರು.

ನಾನು ಡ್ರೈವರ್‌ ಕೆಲಸ ಮಾಡುವುದು. ಬಡವರಲ್ಲಿ ಕಾರು ಇರುವುದು ತಪ್ಪಾ? ಎರಡು ಎಕ್ರೆ ಭೂಮಿ ಇದ್ದವರಲ್ಲೂ ಬಿಪಿಎಲ್‌ ಕಾರ್ಡ್‌ ಇರುವುದನ್ನು ನಾನು ತೋರಿಸ್ತೇನೆ. ರೇಷನ್‌ ತೆಗೆಯುವುದಾದರೆ ಅವರದ್ದೂ ತೆಗೆಯಲಿ ಎಂದು ಸತೀಶ್‌ ಸವಾಲು ಹಾಕಿದರು.

ದೀಪಾ ಅವರಿಗೆ ನಾನು ಕೈ ಮುಗಿದು sorry ಕೇಳ್ಬೇಕು, ಅದನ್ನು ನಾನು ಸೋಷಿಯಲ್‌ ಹಾಕ್ಬೇಕು ಎನ್ನುವುದು ಅವರ ಡಿಮ್ಯಾಂಡ್.‌ ನಾನು ತಪ್ಪು ಮಾಡದೆ ಯಾಕೆ ಸಾರಿ ಕೇಳ್ಬೇಕು ಎಂದು ಪ್ರಶ್ನಿಸಿದ ಅವರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ಜನರ ಪರವಾಗಿ ಹೋರಾಟ ಮುಂದುವರಿಸ್ತೇವೆ.

ಆಣೆ ಮಾಡಲಿ

ರೇಷನ್‌ ಅಂಗಡಿಯಲ್ಲಿ ಅವ್ಯವಹಾರ ಆಗುತ್ತಿಲ್ಲ ಅಂತ ಮಾಲಕ ಮಂಜುನಾಥ್‌ ನಾಯ್ಕ್‌ ಹೇಳಲಿ. ಇವರ ಸೊಸೆ ದೀಪಾ ನಾಯಕ್ ಮೊನ್ನೆ ಮೊನ್ನೆ ಬಂದಿದ್ದಾರೆ. ಇಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಲೋಡು ಲೋಡು ಅಕ್ಕಿ ಹೋಗುವುದನ್ನು ನೋಡಿದವರಿದ್ದಾರೆ. ನಾನು ಅಂಬ್ಯುಲೆನ್ಸ್‌ ಡ್ಯೂಟಿಯಲ್ಲಿದ್ದ ವೇಳೆ ಬೆಳಿಗ್ಗೆ ನಾಲ್ಕು ಗಂಟೆಗೆ ಗೂಡ್ಸ್‌ ಗಾಡಿಯಲ್ಲಿ ಅಕ್ಕಿ ಲೋಡ್‌ ಮಾಡುತ್ತಿರುವುದನ್ನು ನೋಡಿದ್ದಾಗಿ ಸತೀಶ್ ಹೇಳಿದರು.

ಸಿಸಿ ಕೆಮಾರಾ ಹಾಕಲಿ!
ಒಂದು ಸಿಸಿ ಕೆಮಾರಾ ಹಾಕಿದರೆ ಇಲ್ಲಿನ ಅವ್ಯವಹಾರ ಬಯಲಾಗುತ್ತದೆ. ದೀಪಾ ನನ್ನ ಮೊಬೈಲ್‌ ನೆಲಕ್ಕೆ ಹಾಕಿದ್ದಾರೆ. ನನ್ನ ವಾಯ್ಸ್‌ ದೊಡ್ಡದು. ಈ ವಿಡಿಯೋ ಗೋಣಿ ವಿಚಾರದಲ್ಲಿ ವೈರಲ್‌ ಆಗಿದೆ ಎಂದು ಸತೀಶ್‌ ಹೇಳಿದರು. ನಮಗೆ ನೂರು ಕೇಜಿ ಅಕ್ಕಿ ಸಿಗವುದು ನಿಜ. ಯಾಕೆಂದರೆ ನಮ್ಮ ಕುಟುಂಬಕ್ಕೆ ಒಂದೇ ರೇಷನ್‌ ಕಾರ್ಡ್‌ ಇದೆ. ಅದನ್ನು ಕ್ಯಾನ್ಸಲ್‌ ಮಾಡ್ಲಿಕ್ಕೆ ಒಂದೂವರೆ ವರ್ಷದಿಂದ ಅಲೆದಾಡುತ್ತಿದ್ದೇವೆ ಆದರೂ ಆಗ್ತಾ ಇಲ್ಲ ಎಂದರು.

ಎಲ್ಲ ಕ್ಲಿಯರ್‌ ಆದ್ಮೇಲೆ ಪ್ರೆಸ್‌ಮೀಟ್‌ ಕರೆದ್ರು!

ಸತೀಶ್‌ ಸೋದರ ವಿಜಯ್‌ ಮಾತನಾಡಿ, ವಿಡಿಯೋ ವೈರಲ್‌ ಆಗುತ್ತಿದ್ದಂತೆ ದೀಪಾ ನಾಯ್ಕ್‌ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ ನನ್ನ ಹೆಸರನ್ನೂ ಎಳೆದು ತಂದಿದ್ದಾರೆ. ಪೊಲೀಸರು ನಮ್ಮನ್ನು ಕರೆಸಿ ವಿಡಿಯೋ ಡಿಲೀಟ್‌ ಮಾಡಿಸಲು ಹೇಳಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಡಿಲೀಟ್‌ ಮಾಡಿಸಿದ್ದೇವೆ. ಪೊಲೀಸರಿಗೆ ನಾವು ಮುಚ್ಚಳಿಕೆ ಬರೆದುಕೊಟ್ಟು ಬಂದಿದ್ದೆವು. ಪೊಲೀಸ್‌ ಠಾಣೆಯಲ್ಲಿ ಎಲ್ಲಾ ಕ್ಲಿಯರ್‌ ಆದ್ಮೇಲೆ ಪ್ರೆಸ್‌ ಮೀಟ್‌ ಕರೆದಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೇವಕಿ ಹಾಗೂ ಮೀನಾಕ್ಷಿ ಉಪಸ್ಥಿತರಿದ್ದರು.

ʻಗೋಣಿಯಿಂದ ಮಾನ ಹಾನಿ, ಬಜ್ಪೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ‌ʼ

error: Content is protected !!