ಮಂಗಳೂರು: ಇತ್ತೀಚೆಗೆ ಕಟೀಲು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಜೊತೆಗೇ ಗೋಣಿಯನ್ನೂ ಕೊಡಬೇಕು ಎಂದು ಗ್ರಾಹಕರೊಬ್ಬರು ಗಲಾಟೆ ಮಾಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ವಿವಾದ ಎಬ್ಬಿಸಿತ್ತು. ಈ ಕುರಿತು ನ್ಯಾಯಬೆಲೆ ಅಂಗಡಿ ಮಾಲಕಿ ದೀಪಾ ನಾಯಕ್ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಸ್ತುಸ್ಥಿತಿ ವ್ಯಕ್ತಪಡಿಸಿದರು.
“ಗೋಣಿ ಚೀಲವನ್ನು ಕೊಡದಿದ್ದಂತೆ ಸುಳ್ಳು ಕಲ್ಪನೆ ಮೂಡಿಸಿ, ವಿಡಿಯೋ ಮಾಡಿ ವೈರಲ್ ಮಾಡಿದ ವ್ಯಕ್ತಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇಂದಿಗೂ ಯಾವುದೇ ಕ್ರಮ ಕೈಗೊಳ್ಳಿಲ್ಲ. ಇದರಿಂದ ನಮ್ಮ ಮಾನ ಹಾನಿಯಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸತೀಶ ಹಾಗೂ ವಿಜಯ ಎಂಬಿಬ್ಬರು ಅಣ್ಣ-ತಮ್ಮ ಯಾವಾಗಲೂ ಕಿರಿಕ್ ಮಾಡುತ್ತಲೇ ಇದ್ದಾರೆ. ಇವರಿಂದಾಗಿ ನಮಗೆ ಮಾನಸಿಕ ಹಿಂಸೆಯಾಗಿದೆ ಎಂದು ಆರೋಪಿಸಿದರು.
ಗ್ರಾಹಕರಲ್ಲಿ ತಪ್ಪು ಕಲ್ಪನೆ
ಅಕ್ಕಿಯೊಂದಿಗೆ ಉಚಿತವಾಗಿ ಗೋಣಿ ನೀಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರನ್ನೇ ಅನುಮಾನದಿಂದ ನೋಡುವ ಪರಿಸ್ಥಿತಿ ಉಂಟಾಗಿದೆ ಎಂದು ದೀಪಾ ನಾಯಕ್ ಆರೋಪಿಸಿದರು.
ಸರ್ಕಾರದ ಆದೇಶವೇ ಸಾಕ್ಷಿ
“ಕರ್ನಾಟಕ ಸರ್ಕಾರದ 13-04-2016ರ ಆದೇಶ ಮತ್ತು 06-11-2018ರಿಂದ ಜಾರಿಗೆ ಬಂದ ನಿಯಮದ ಪ್ರಕಾರ, ಪ್ರತಿ ಕ್ವಿಂಟಾಲಿಗೆ ಅಂಗಡಿದಾರರಿಗೆ ₹56 ಲಾಭಾಂಶ ನೀಡಲಾಗುತ್ತದೆ. ಇದರಲ್ಲಿ ₹36 ನಗದು, ಉಳಿದ ₹20 ಅನ್ನು ಎರಡು ಗೋಣಿ ಚೀಲಗಳ ರೂಪದಲ್ಲಿ ನೀಡಲಾಗುತ್ತದೆ. ಅಂದರೆ, ಗೋಣಿ ಅಂಗಡಿ ಮಾಲೀಕರಿಗೇ ಸೇರಿದವು, ಅದನ್ನು ಗ್ರಾಹಕರಿಗೆ ಉಚಿತವಾಗಿ ನೀಡುವ ನಿಯಮವೇ ಇಲ್ಲ” ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಹೆಚ್ಚುವರಿ ಅಕ್ಕಿ ವಿತರಣೆ ಬೇಡಿಕೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ಹಾಗೂ ಇತರರು, “ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯ ಪ್ರಕಾರ ಎಲ್ಲ ಅರ್ಹ ಕಾರ್ಡ್‌ಧಾರಿಗಳಿಗೆ ಅಕ್ಕಿ ನೀಡಬೇಕಾಗಿದೆ. ಇತ್ತೀಚೆಗೆ ಮಾಜಿ ಆಹಾರ ಸಚಿವ ಯು.ಟಿ. ಖಾದರ್ ಅವರು ವಿಧಾನಸಭೆಯಲ್ಲಿ ತಿಳಿಸಿದಂತೆ, ಹೆಚ್ಚುವರಿ 10% ಅಕ್ಕಿ ಕೂಡ ತಕ್ಷಣ ವಿತರಿಸಬೇಕಾಗಿದೆ. ಹಾಗೆಯೇ ಎಪಿಲ್ ಕಾರ್ಡ್‌ಧಾರರಿಗೂ ಅಕ್ಕಿ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಫೈರೋಜ್ ಡಿ.ಎಂ., ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ಉಪಸ್ಥಿತರಿದ್ದರು.