ಪಾಟ್ನಾ: ಬಿಹಾರದ ಪಾರ್ಸಾ ಬಜಾರ್ ಸಮೀಪ ರಾಷ್ಟ್ರೀಯ ಹೆದ್ದಾರಿ–83 ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಉದ್ಯಮಿಗಳು ಸ್ಥಳದಲ್ಲೇ ಮೃತರಾದ ಘಟನೆ ನಡೆದಿದೆ.
ಪಾಟ್ನಾದ ರಾಜೇಶ್ ಕುಮಾರ್ (50), ಪಟೇಲ್ ನಗರ ನಿವಾಸಿ ಸಂಜಯ್ ಕುಮಾರ್ ಸಿನ್ಹಾ (55), ಕಮಲ್ ಕಿಶೋರ್ (38), ಸಮಸ್ತಿಪುರದ ಪ್ರಕಾಶ್ ಚೌರಾಸಿಯಾ (35) ಹಾಗೂ ಮುಜಫರ್‌ಪುರದ ಸುನಿಲ್ ಕುಮಾರ್ (38) ಮೃತಪಟ್ಟವರಾಗಿದ್ದಾರೆ.
ಫತುಹಾದಿಂದ ಪಾಟ್ನಾಕ್ಕೆ ಹಿಂದಿರುಗುತ್ತಿದ್ದಾಗ ಅತಿವೇಗದಲ್ಲಿ ಬಂದ ಕಾರು ಎದುರಿಗೆ ಸಾಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆದಲು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಮೊಬೈಲ್‌ಗಳಿಗೆ ಬಂದ ಕರೆಗಳ ಆಧಾರದ ಮೇಲೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ (PMCH) ಕಳುಹಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.