ಬೆಳ್ತಂಗಡಿ: ಧರ್ಮಸ್ಥಳದ ಕುರಿತು ಎಐ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಮೇಲೆ ಬೆಳ್ತಂಗಡಿ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿತ ಸಮೀರ್ ಬೆಳ್ತಂಗಡಿ ಠಾಣೆಗೆ ಎರಡು ಬಾರಿ ಹಾಜರಾಗಿದ್ದರೂ, ಬಳಿಕ ತನಿಖೆಗೆ ಅಗತ್ಯವಾದ ಸಹಕಾರ ನೀಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದ ತಂಡದವರು ಎಫ್.ಎಸ್.ಎಲ್. ವಿಭಾಗ ಮತ್ತು ಸೋಕೊ ಸಿಬ್ಬಂದಿಯೊಂದಿಗೆ ಸೆಪ್ಟೆಂಬರ್ 4ರಂದು ಮಧ್ಯಾಹ್ನ 1.40ಕ್ಕೆ ಬೆಂಗಳೂರು ಬನ್ನೇರುಘಟ್ಟದ ಹುಳ್ಳಹಳ್ಳಿಯಲ್ಲಿರುವ ಸಮೀರ್‌ನ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ಇದಕ್ಕೂ ಮುನ್ನ, ಸೆಪ್ಟೆಂಬರ್ 3ರಂದು ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ತಂಡ ಕಾರ್ಯಾಚರಣೆಗೆ ತೆರಳಿತ್ತು. ದಾಳಿಯ ವೇಳೆ, ಸಮೀರ್ ಎಐ ವಿಡಿಯೋ ಸೃಷ್ಟಿಸಲು ಬಳಸಿದ್ದ ಎಂದು ಶಂಕಿಸಲಾಗಿರುವ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತನಿಖೆಯ ಸಂದರ್ಭದಲ್ಲಿ, ಸಮೀರ್ “ನನಗೆ ತಿಳಿದ ಮಾಹಿತಿಯನ್ನು ಆಧರಿಸಿ ಮಾತ್ರ ಎಐ ವಿಡಿಯೋ ಮಾಡಿದ್ದೆ. ಯಾವುದೇ ತಪ್ಪು ಉದ್ದೇಶವಿರಲಿಲ್ಲ. ವಿಡಿಯೋ ಪ್ರಸಾರಕ್ಕೂ ಮುನ್ನ ಡಿಸ್ಕ್ಲೇಮರ್ ಹಾಕಿದ್ದೆ” ಎಂದು ಹೇಳಿಕೆ ನೀಡಿದ್ದಾನೆ. ಆದರೆ, ತನಿಖೆಗೆ ನಿರಂತರವಾಗಿ ಸೂಕ್ತ ಸ್ಪಂದನೆ ನೀಡದ ಕಾರಣ ಪೊಲೀಸರು ಮನೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಮೀರ್‌ನ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ