ಇಲಿಗೆ ಆಹಾರವಾಯ್ತು ಪೋಷಕರು ತೊರೆದ ಮಗು!

ಇಂದೋರ್: ಜನ್ಮದ ಕೆಲವೇ ದಿನಗಳಲ್ಲಿ ಪೋಷಕರು ತೊರೆದಿದ್ದ ಹೆಣ್ಣು ಮಗು, ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲೇ ಇಲಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಮಹಾರಾಜ ಯಶ್ವಂತ್ ರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗು ಕೇವಲ 1.2 ಕೆ.ಜಿ. ತೂಕ ಹೊಂದಿದ್ದು, ಹಿಮೋಗ್ಲೋಬಿನ್ ಕೊರತೆ ಹಾಗೂ ಶ್ವಾಸಕೋಶದ ತೊಂದರೆಯಿಂದ ವೆಂಟಿಲೇಟರ್ ಬೆಂಬಲದಲ್ಲಿತ್ತು. ಇದೇ ವೇಳೆ ಇಲಿಗಳು ಭುಜ ಹಾಗೂ ಬೆರಳಿಗೆ ಕಚ್ಚಿ ಗಾಯಗೊಳಿಸಿದ ಬಳಿಕ ಮಗು ಸೆಪ್ಟಿಸೆಮಿಯಾದಿಂದ ಸಾವನ್ನಪ್ಪಿದೆ ಎಂದು ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ತಿಳಿಸಿದ್ದಾರೆ.

ಇಲಿಗಳ ದಾಳಿಗೆ ಒಳಗಾದ ಮತ್ತೊಂದು ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಪ್ರಸ್ತುತ ಸ್ಥಿತಿ ಸ್ಥಿರವಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಐಸಿಯುನಲ್ಲಿ ಇಲಿಗಳ ಕಾಟ ಕಳೆದ 4ರಿಂದ 5 ದಿನಗಳಿಂದ ಮಾತ್ರ ಇತ್ತು ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆ ಡೀನ್‌ ಡಾ. ಘಂಘೋರಿಯಾ ವಾದಿಸಿದ್ದಾರೆ.

ಘಟನೆಗೆ ಸಂಬಂಧಿಸಿ ನರ್ಸಿಂಗ್ ಅಧಿಕಾರಿಗಳಾದ ಆಕಾಂಶಾ ಬೆಂಜಮಿನ್ ಮತ್ತು ಶ್ವೇತಾ ಚೌಹಾಣ್‌ರನ್ನು ಅಮಾನತು ಮಾಡಲಾಗಿದೆ. ಮುಖ್ಯ ನರ್ಸ್, ಐಸಿಯು ಉಸ್ತುವಾರಿ ಹಾಗೂ ಶಿಶು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೆ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಯಲ್ಲಿ ಬದಲಾವಣೆ ಮಾಡಲಾಗಿದೆ. ಹಾಗೂ ಕೀಟ ನಿಯಂತ್ರಣ ಕಂಪನಿಗೆ ₹1 ಲಕ್ಷ ದಂಡ ವಿಧಿಸಲಾಗಿದೆ.

ಇತ್ತೀಚಿನ ಮಳೆಯಿಂದಾಗಿ ಆಸ್ಪತ್ರೆ ಕಟ್ಟಡದ ಬಳಿ ನೀರು ನಿಂತಿದ್ದೇ ಇಲಿಗಳ ಹಾವಳಿಗೆ ಕಾರಣವಾಗಿರಬಹುದೆಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಘಟನೆಯ ಪರಿಶೀಲನೆಗಾಗಿ 5 ವೈದ್ಯರು ಹಾಗೂ ನರ್ಸಿಂಗ್ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಲಾಗಿದ್ದು, ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

error: Content is protected !!