ಜಿಎಸ್‌ಟಿ ದರ ಇಳಿಕೆ?; ತಂಬಾಕು, ಮದ್ಯಕ್ಕೆ ʻಪಾಪ ತೆರಿಗೆʼ, ಆರೋಗ್ಯ ಸೆಸ್!

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಇಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ವತಿಯಿಂದ ಸಭೆ ಸೇರಿ ದರ ತರ್ಕಬದ್ಧಗೊಳಿಸುವಿಕೆ ಹಾಗೂ ದೈನಂದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆ ಮಾಡುವ ಮತ್ತು ಹೆಚ್ಚಿನ ಸರಕುಗಳಿಗೆ ತೆರಿಗೆ ವಿಧಿಸುವ ವ್ಯಾಪ್ತಿಯನ್ನು ಕಡಿಮೆ ಮಾಡುವ ಟು-ಸ್ಲ್ಯಾಬ್‌ ವ್ಯವಸ್ಥೆಯ ಕುರಿತು ಚರ್ಚೆ ನಡೆಯುತ್ತಿದ್ದು, ಇದರಲ್ಲಿ ರಾಜ್ಯಗಳ ಹಣಕಾಸು ಮಂತ್ರಿಗಳೂ ಭಾಗಿಯಾಗಿದ್ದಾರೆ. ‌

ಪ್ರಸ್ತುತ 5, 12, 18 ಮತ್ತು 28 ಪ್ರತಿಶತ ಸ್ಲ್ಯಾಬ್‌ಗಳಿರುವ ವ್ಯವಸ್ಥೆಯನ್ನು ಬದಲಿಸಿ ಕೇವಲ 5 ಮತ್ತು 18 ಪ್ರತಿಶತದ ಎರಡು ದರಗಳನ್ನು ಉಳಿಸಬೇಕೆಂಬ ಪ್ರಸ್ತಾಪ ಮಂಡಳಿಯ ಮುಂದಿದೆ. ತಂಬಾಕು ಸೇರಿದಂತೆ ಕೆಲವು ಉತ್ಪನ್ನಗಳ ಮೇಲೆ 40 ಪ್ರತಿಶತದವರೆಗೆ ‘ಪಾಪ ತೆರಿಗೆ’ ವಿಧಿಸುವ ಯೋಚನೆಯೂ ಚರ್ಚೆಗೆ ಬಂದಿದೆ.

28 ಪ್ರತಿಶತ ವರ್ಗದಲ್ಲಿರುವ ಸುಮಾರು 90 ಪ್ರತಿಶತ ಸರಕುಗಳನ್ನು 18 ಪ್ರತಿಶತಕ್ಕೆ ಹಾಗೂ 12 ಪ್ರತಿಶತ ಸರಕುಗಳನ್ನು 5 ಪ್ರತಿಶತ ಸ್ಲ್ಯಾಬ್‌ಗೆ ಇಳಿಸುವ ಶಿಫಾರಸು ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗದ ಬಳಕೆ ಹೆಚ್ಚುವ ನಿರೀಕ್ಷೆಯಿದೆ. ಆದರೆ, ಈ ಕ್ರಮದಿಂದ ₹50,000 ಕೋಟಿ ಆದಾಯ ನಷ್ಟವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಪಾಪ ತೆರಿಗೆ!
ಜೀವ ಹಾಗೂ ಆರೋಗ್ಯ ವಿಮಾ ಪ್ರೀಮಿಯಂಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವ ಶಿಫಾರಸು ಮಂಡಳಿಯ ಮುಂದಿದ್ದು, ಪ್ರಸ್ತುತ ಇವುಗಳ ಮೇಲೆ 18 ಪ್ರತಿಶತ ತೆರಿಗೆ ವಿಧಿಸಲಾಗುತ್ತಿದೆ. ಮತ್ತೊಂದೆಡೆ, ಐಷಾರಾಮಿ ಕಾರುಗಳು, ತಂಬಾಕು ಉತ್ಪನ್ನಗಳು ಮತ್ತು ಮದ್ಯದ ಮೇಲಿನ ‘ಪಾಪ ತೆರಿಗೆ’ ಹಾಗೂ ಆರೋಗ್ಯ ಸೆಸ್ ಜಾರಿಯ ಸಾಧ್ಯತೆಯಿದೆ.

ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ, ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ 7.8 ಪ್ರತಿಶತಕ್ಕೆ ಏರಿಕೆಯಾಗಿದೆ. ಜಿಎಸ್‌ಟಿ ಸುಧಾರಣೆಗಳಿಂದ ಖರ್ಚು ಹಾಗೂ ಬಳಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಸರ್ಕಾರಕ್ಕೆ ಇದೆ. ಎಸ್‌ಬಿಐ ಅಧ್ಯಯನ ವರದಿಯ ಪ್ರಕಾರ, ತೆರಿಗೆ ಪರಿಷ್ಕರಣೆ ಹಾಗೂ ಆದಾಯ ತೆರಿಗೆ ಕಡಿತಗಳು ಒಟ್ಟಾರೆ ಬಳಕೆಯನ್ನು ₹5.31 ಲಕ್ಷ ಕೋಟಿಯವರೆಗೆ ಹೆಚ್ಚಿಸಬಹುದು.

ಆದರೆ, ಕೆಲವು ರಾಜ್ಯಗಳು ಜಿಎಸ್‌ಟಿ ಪರಿಷ್ಕರಣೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಆದಾಯ ನಷ್ಟಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸುತ್ತಿವೆ. ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳದ ಹಣಕಾಸು ಸಚಿವರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸಜ್ಜಾಗಿದ್ದಾರೆ.

ಸರ್ಕಾರದ ಪ್ರಕಾರ, ದರ ತರ್ಕಬದ್ಧಗೊಳಿಸುವಿಕೆ, ರಚನಾತ್ಮಕ ಸುಧಾರಣೆಗಳು ಹಾಗೂ ಬದುಕಿನ ಸುಲಭತೆ – ಇವು ಈ ಜಿಎಸ್‌ಟಿ ಪರಿಷ್ಕರಣೆಯ ಮೂರು ಸ್ತಂಭಗಳಾಗಿದ್ದು, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿಸಲು ದಾರಿತೋರಲಿವೆ.

error: Content is protected !!