ಹೈದರಾಬಾದ್‌ನಲ್ಲಿ ಕಿಡ್ನ್ಯಾಪ್‌ ಜಾಲ ಪತ್ತೆ: ಐವರು ಪೊಲೀಸರ ವಶ !

ಹೈದರಾಬಾದ್: ನಗರದಲ್ಲಿ ಐದು ವರ್ಷಗಳಿಂದ ನಡೆಯುತ್ತಿದ್ದ ಮಕ್ಕಳ ಅಪಹರಣ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಹೈದರಾಬಾದ್, ಸೈಬರಾಬಾದ್ ಮತ್ತು ಸಂಗರೆಡ್ಡಿ ಜಿಲ್ಲೆಗಳಲ್ಲಿ ಈ ಗ್ಯಾಂಗ್ ಕಾರ್ಯನಿರ್ವಹಿಸುತ್ತಿತ್ತು. ಈ ಗ್ಯಾಂಗ್ ಹೆಚ್ಚು ಮಕ್ಕಳನ್ನು ಹೊಂದಿರುವ ಕಾರ್ಮಿಕ ವರ್ಗದ ಪೋಷಕರನ್ನು ಗುರಿಯಾಗಿಸಿಕೊಂಡು ಅಪಹರಣ ದಂಧೆಯಲ್ಲಿ ತೊಡಗಿತ್ತು. ಅಪಹರಣ ಮಾಡಿದ ಮಕ್ಕಳನ್ನು, ಮಕ್ಕಳಿಲ್ಲದವರಿಗೆ 1 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ಮಾರಾಟ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಿ. ವಿನೀತ್ ತಿಳಿಸಿದ್ದಾರೆ.

4 ವರ್ಷದ ಬಾಲಕನ ಅಪಹರಣಕ್ಕೆ ಸಂಬಂಧಿಸಿದ ದೂರಿನ ನಂತರ ಆ.26 ರಂದು ತನಿಖೆ ಪ್ರಾರಂಭಿಸಲಾಗಿತ್ತು. ಪೊಲೀಸರು ತೀವ್ರ ಹುಡುಕಾಟ ನಡೆಸಿದಾಗ, ಪ್ರಮುಖ ಆರೋಪಿ ಚಿಲುಕುರಿ ರಾಜು ಎಂಬಾತನ ಸುಳಿವು ಸಿಕ್ಕಿತ್ತು. ಈತ ಆಯುರ್ವೇದ ವೈದ್ಯನಾಗಿದ್ದು, ಪ್ರಕರಣದ ಮಾಸ್ಟರ್ ಮೈಂಡ್ ಇವನೇ ಆಗಿದ್ದ. ಈತ ಸಹಚರರ ಜೊತೆ ಸೇರಿ ಮಕ್ಕಳ ಮಾರಾಟ ಜಾಲ ನಡೆಸುತ್ತಿದ್ದ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ರಾಜು ಬಂಧನದ ನಂತರ, ಈ ದಂಧೆಯಲ್ಲಿ ಭಾಗಿಯಾಗಿದ್ದ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತರಕಾರಿ ಮಾರಾಟಗಾರ ಮೊಹಮ್ಮದ್ ಆಸಿಫ್, ವೈದ್ಯ ರಿಜ್ವಾನಾ, ಮೇಸ್ತ್ರಿ ನರಸಿಂಹ ರೆಡ್ಡಿ ಮತ್ತು ಬಾಲರಾಜ್ ಎಂದು ಗುರುತಿಸಲಾಗಿದೆ.

ಪೊಲೀಸರು 4 ವರ್ಷದ ಬಾಲಕ ಸೇರಿದಂತೆ ಆರು ಮಕ್ಕಳನ್ನು ರಕ್ಷಿಸಿದ್ದಾರೆ. ರಕ್ಷಿಸಲಾದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಹಸ್ತಾಂತರಿಸಲಾಗಿದೆ. ಒಬ್ಬ ಬಾಲಕನ ಪೋಷಕರನ್ನು ಪತ್ತೆ ಮಾಡಲಾಗಿದೆ. ಉಳಿದಂತೆ ಇಬ್ಬರನ್ನು ಪೋಷಕರೇ ಮಾರಾಟ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳಿಂದ 5 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!