ಮೂಡಬಿದ್ರೆ: ಜಗಳ ಮಾಡಿಕೊಂಡು ಬಂದು ಇನ್ಸ್‌ಪೆಕ್ಟರ್ ಸಮಕ್ಷಮದಲ್ಲಿ ಪೊಲೀಸ್ ಠಾಣೆಯಲ್ಲಿ ರಾಜಿಯಾಗಿದ್ದ ದಂಪತಿಯ ಮಧ್ಯೆ ಬಂದ ಪೊಲೀಸ್ ಓರ್ವರು ಅಮಾನತು ಆದ ಘಟನೆ ಮೂಡಬಿದ್ರೆಯಲ್ಲಿ ನಡೆದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಶಾಂತಪ್ಪ ಪ್ರಕರಣದ ಆರೋಪಿ.

ತೋಡಾರು ಬಳಿಯ ವಿವಾಹಿತ ಮಹಿಳೆಯೊಬ್ಬಳು ತಮ್ಮ ಕೌಟುಂಬಿಕ ಸಮಸ್ಯೆಯ ಬಗ್ಗೆ ಆ.23ರಂದು ಮೂಡಬಿದ್ರೆ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದರು. ದೂರು ಕೈಗೆತ್ತಿಕೊಂಡಿದ್ದ ಪೊಲೀಸ್ ನಿರೀಕ್ಷಕ ಸಂದೇಶ್ ಅವರು ಪತಿ ಹಾಗೂ ಪತ್ನಿಯನ್ನು ಠಾಣೆಗೆ ಕರೆಸಿ ಮಾತನಾಡಿ, ಇಬ್ಬರನ್ನೂ ರಾಜಿ ಮಾಡಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಕಳುಹಿಸಿದ್ದರು.
ಈ ನಡುವೆ ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ ಶಾಂತಪ್ಪ ಸಂತ್ರಸ್ತ ಮಹಿಳೆ ನೀಡಿದ್ದ ದೂರು ಪ್ರತಿಯಲ್ಲಿದ್ದ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಕರೆ ಮಾಡಿ, ಸ್ನೇಹ ಸಂಪಾದಿಸಿದ್ದ. ಆ.25ರಿಂದ ಸೆ.1ರ ವರೆಗೂ ಆಕೆಗೆ ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ, ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದ ಎಂದು ಮಹಿಳೆ ಸೆ.1ರಂದು ಮೂಡುಬಿದಿರೆ ಠಾಣೆಗೆ ಬಂದು ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್ ಸಹಿತ ದೂರು ನೀಡಿದ್ದಳು.
ಈ ಹಿನ್ನೆಲೆಯಲಲ್ಲಿ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಶಾಂತಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಉದ್ಯೋಗದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.